Study Circle- ಚಿಂತನಾ ಸರಣಿ -8, ದಿ.14-12-22
(ಪ.ಪೂ.ಗುರುಗಳ ಪ್ರವಚನದಿಂದ)
卐卐卐卐卐卐卐卐卐卐卐卐卐卐卐卐卐卐
ನಾವು ಚಿಕ್ಕವರಿದ್ದಾಗ ಅಂದರೆ 5,6ಅಥವಾ7 ಕ್ಲಾಸ್
ಓದುತ್ತಿರುವಾಗ ,ಏನಾದರೂ ವಿಷಯಕೊಟ್ಟು ಅದರ
ಮೇಲೆ ಒಂದು ಪುಟದಷ್ಟು ಪ್ರಬಂಧ ಬರೆಯಲು
ಹೇಳುತ್ತಿದ್ದರು.ಅಂತಹ ಒಂದು ವಿಷಯ ಒಂದು ಇತ್ತು
ಅದೇನೆಂದರೆ " ಜೀವನದ ಗುರಿ ಏನು ಇರಬೇಕು ?
ಅದಕ್ಕೆ ಸಾಮಾನ್ಯವಾಗಿ ಹೇಳುವಾಗ "ಗುರಿ ಇಲ್ಲದ
ಜೀವನ ಎಂದರೆ ,ಗಾಳಿಪಟ ಅಥವಾ ಯಾವದೇ ದಿಕ್ಕು ದೆಸೆ ಇಲ್ಲದ ಸಮುದ್ರದಲ್ಲಿ ಹೊರಟ ಹಡಗಿನಂತೆ.
ಅದು ಯಾವ ದಡ ಮುಟ್ಟುತ್ತದೆ ಗೊತ್ತಿಲ್ಲ ಅಥವಾ
ಸಮುದ್ರದ ಯಾವದೋ ಭಾಗದಲ್ಲಿ ಯಾವಾಗ
ಮುಳುಗುತ್ತದೆ ಗೊತ್ತಿಲ್ಲ.ಹಾಗೆಯೆ ನಿರ್ದಿಷ್ಟ ಗುರಿ ಅಥವಾ ಏನಾದರೂ ಸಾಧಿಸಬೇಕು ಎಂಬ ನಿರ್ಧಾರ
ಇಲ್ಲದ ಜೀವನದ ಗತಿ ಹೀಗೆಯೇ ಆಗುತ್ತದೆ.
ಪ.ಪೂ.ಗುರುಗಳು ಹೇಳುತ್ತಾರೆ, ಈಗ ನಾವು ಹೇಗೆ
ಆಗಿದ್ದೇವೆ ಎಂದರೆ ಎಂದೂ ಮುಗಿಯದ ಈ ಪ್ರಪಂಚದ ಕಥೆಯಲ್ಲಿಯೆ ನಾವು ರಮಿಸುತ್ತೇವೆ, ಅದರಲ್ಲಿಯೆ ನಮ್ಮ ಜೀವನ ಸಾರ್ಥಕ ಎಂದುಕೊಂಡು
ಹೊರಟು ಬಿಟ್ಟಿದ್ದೇವೆ.ಹುಟ್ಟಿದಾರಭ್ಯ ಇಂದಿನವರೆಗೂ
ಒಂದು ಸಲವಾದರೂ ಸುಮ್ಮನೆ ಏಕಾಂತದಲ್ಲಿ ಕುಳಿತು
ಏಕೆ , ಹೇಗೆ ಹುಟ್ಟಿದ್ದೇವೆ? ಏಲ್ಲಿಗೆ ಹೀಗೆ ಹೋಗುತ್ತೇವೆ?
ಇದರ ಬಗೆಗೆ ಒಮ್ಮೆಯಾದರೂ ವಿಚಾರ ಮಾಡಿರುತ್ತೇವೆಯೇ,ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳೋಣ.ಎಂದೂ ಮುಗಿಯದ ಕಥೆ ಎಂದರೇನು ನೋಡೋಣ.
ಒಂದು ಊರಿನಲ್ಲಿ ಒಬ್ಬ ರಾಜನಿದ್ದನು.ಅವನಿಗೆ ಕಥೆ ಕೇಳುವ ಬಯಕೆ ಆಯಿತು.ಅದೂ ಕೂಡಾ ನಿರಂತರ
ಅಂದರೆ ಮುಗಿಯದೇ ಇರುವ ಕಥೆ ಇರಬೇಕು.ಅಂತಹ
ಕಥೆ ಹೇಳುವವರಿಗೆ ಲಕ್ಷ ಬಂಗಾರದ ವರಾಹ ಕೊಡುವದಾಗಿ ರಾಜ್ಯದಲ್ಲಿ ಡಂಗುರ ಸಾರಿಸಿದ.
ಪ್ರವಚನ ಕಾರರು,ಕಥಾಕಾರರು.ನಾನಾ ಜನ ಬಂದು,
ರಾಮಾಯಣ, ಮಹಾಭಾರತ, ಭಾಗವತ, ಹದಿನೆಂಟು
ಪುರಾಣ ಎಲ್ಲವೂ ಮುಗಿದವು.ಇನ್ನೂ ಏನು ಹೇಳಬೇಕು ಎಂದು ಈ ವಿದ್ವಾಂಸರು ,ಪಂಡಿತರು ಸಭೆ
ಮಾಡಿ ಚಿಂತನೆ ಮಾಡತೊಡಗಿದರು ನಿರಂತರ
ಎಂದೂ ಮುಗಿಯದ ಕಥೆ ಎಂದರೆ ಎಂತಹದು
ಎನ್ನುವ ವಿಚಾರಕ್ಕೆ ತೊಡಗಿದರು.ಇವರ ಈ ಸಭೆಯ
ಗದ್ದಲಕ್ಕೆ ಅಲ್ಲಿಯೇ ಇದ್ದ ಹಿರಿಯ ವಯಸ್ಸಾದ ಒಕ್ಕಲಿಗ ರೈತನೊಬ್ಬ ಅಲ್ಲಿಯ ಪಂಡಿತರನ್ನು ವಿಚಾರಿಸಿದ, ಅವರು ರಾಜ ಹೇಳಿದ ವಿಚಾರ ಹೇಳಿದರು.ಆಗ ಅವನು ನಾನು ಅಂತಹ ಕಥೆ
ಹೇಳುತ್ತೇನೆ ನನ್ನನ್ನು ರಾಜನ ಕಡೆಗೆ ಕರೆದೊಯ್ಯಿರಿ
ಎಂದು ಹೇಳಿದ.ಅದನ್ನೂ ಈ ಪಂಡಿತರು ಹಾಸ್ಯ
ಮಾಡಿದರು.ಅವನೇನು ಅವರನ್ನು ಪರಿಗಣಿಸದೆ
ನೀವು ಕರೆದುಕೊಂಡು ಹೋಗಿ ರಾಜನನ್ನು
ಭೆಟ್ಟಿ ಮಾಡಿಸಿ ನೋಡಿರಿ ಎಂದ.ಆಯಿತು ಎಂದು
ಅವನನ್ನು ರಾಜನ ಕಡೆಗೆ ಕರೆದುಕೊಂಡು ಹೋದರು.
ರಾಜನೂ ಆಶ್ಚರ್ಯದಿಂದ ಇವನ ಕಡೆ ನೋಡಿದ.ಅವನು ಮಹಾರಾಜರೇ ಒಂದು ಅವಕಾಶ
ಕೊಟ್ಟು ನೋಡಿರಿ ಎಂದು ಹೇಳಿದ.ರಾಜ ಮಂತ್ರಿಯ
ಕಡೆ ನೋಡಿದ.ಮಂತ್ರಿ ಕೊಡಿರಿ ಎಂದು ಹೇಳಿದ.
ಆಯಿತು ಹೇಳು ಎಂದು ರಾಜ ಹೇಳಿದ.ಅದಕ್ಕೆ ಅವನು
ನೋಡಿ ಮಹಾರಾಜರೇ ಕಥೆ ಹೇಳುವವರು
ಮೇಲೆ ಕೂಡಬೇಕು ,ಕೇಳುವವರು ಕೆಳಗೆ ಕೂಡಬೇಕು
ಅಲ್ಲವೇ ಅಂತ ಅಂದ.ಆಯಿತು ಎಂದು ಅವನಿಗೆ
ಸಿಂಹಾಸನ ಬಿಟ್ಟು ಕೆಳಗೆ ಕುಳಿತ.ನೋಡಿ ರಾಜರೇ
ಇದು ಏನೊ ಸರಿ ಆದರೆ ತಲೆಯ ಮೇಲಿ ಕಿರೀಟ
ಇಟ್ಟುಕೊಂಡು ಹೇಳುವವರಿಗಿಂತ ಕೇಳುವವರು ಕುಳಿತರೆ ತಪ್ಪಲ್ಲವೇ ಅಂದ ,ಆಯಿತು ಎಂದು ಕಿರೀಟ
ತೆಗೆದು ರಾಜ ಕುಳಿತ.ರಾಜರೆ ಕಥೆ ಆರಂಭದ
ಮುನ್ನ ಕಥೆ ಹೇಳುವವರಿಗೆ ಶಾಲು ಸನ್ಮಾನ ಮಾಡಿ
ಹಾರ ,ಟೋಪಿ ಹಾಕುವರು ಎಂದು ಕೇಳಿದ್ದೇನೆ ಎಂದ
,ರಾಜ ಇದೇನೂ ಸ್ವಲ್ಪ ಅತಿ ಆಯಿತು ಎನಿಸಿ ಮಂತ್ರಿಯ
ಕಡೆಗೆ ನೋಡಿದ, ಅದಕ್ಕೆ ಮಂತ್ರಿ ಕಥೆ ಕೇಳಬೇಕು
ಅಂದರೆ ಕಥಾಕಾರರಿಗೆ ಸನ್ಮಾನ ಮಾಡಬೇಕು ಎಂದು
ಹೇಳಿದ.ಅದೂ ಆಯಿತು ಇನ್ನಾದರೂ ಕಥೆ
ಪ್ರಾರಂಭ ಮಾಡು ಎಂದು.ಆಯಿತು ಎಂದು ಹೇಳಿ,
ಒಂದು ಊರಿನಲ್ಲಿ ಒಬ್ಬನಿದ್ದ.ಅವನು ಮದುವೆ
ವಯಸ್ಸಿಗೆ ಬಂದ ಅವನ ತಂದೆ ತಾಯಿ ಅವನಿಗೆ
ಮದುವೆ ಮಾಡಿದರು.ಮುಂದೆ ಅವನಿಗೆ ಒಬ್ಬ ಮಗ
ಹುಟ್ಟಿದ, ಅವನೂ ಶಾಲೆ ವಿದ್ಯೆ ಕಲಿತು ಕೆಲಸ
ಪ್ರಾರಂಭಿಸಿದ, ಅವನು ವಯಸ್ಸಿಗೆ ಬಂದ ಕೂಡಲೆ
ತಂದೆ ತಾಯಿ ಅವನಿಗೆ ಕನ್ಯಾ ಶೋಧ ಮಾಡಿ
ಮದುವೆ ಮಾಡಿದರು.ಮುಂದೆ ಎರಡು ಮೂರು
ವರ್ಷ ನಂತರ ಅವನಿಗೂ ಮಕ್ಕಳಾದವು.
ಅವೂ ಹೀಗೆಯೆ ಬೆಳೆದು ವಯಸ್ಸಿಗೆ ಬಂದವು, ಮಗಳಿಗೆ ವರ ನೋಡಿ ಮದುವೆ ಮಾಡಿದ .ನಂತರ
ಮಗನಿಗೂ ಮದುವೆ ಮಾಡಿದ.ಮುಂದೆ ಅವರಿಗೆ
ಮಕ್ಕಳಾದವು ,ಅವೂ ಬೆಳೆದು ವಯಸ್ಸಿಗೆ ಬಂದವು,
ಅವರಿಗೂ ಮದುವೆ ಆಯಿತು, ಮತ್ತೆ ಅವರಿಗೆ
ಮಕ್ಕಳಾದವು..ರಾಜ ಮಂತ್ರಿಗೆ ಹೇಳಿದ ಇವನಿಗೆ
ಬಹುಮಾನದ ಹಣ ಕೊಟ್ಟುಕಳಿಸು ಎಂದು.
ಹೀಗೇಯೇ ನಮ್ಮದೂ ಇರುತ್ತದೆ.ನಮ್ಮ ಹಿಂದಿನವರು
ಮದುವೆ ಆದರು ಅವರ ಮಕ್ಕಳು ಮುಂದೆ ದೊಡ್ಡವರಾಗಿ ಮದುವೆ ಆದರು ಅವರಿಗೆ ನಾವು ಹುಟ್ಟಿ
ಮುಂದೆ ಹೀಗೆಯೇ ಈ ಕಥೆ ನಡೆದೇ ಇರುತ್ತದೆ.
ನಮಗೆ ಈ ನಿರಂತರ ಕಥೆಯಲ್ಲಿಯೇ ಜೀವನ ರಮಿಸುತ್ತದೆ.ದೇವರು ಬೇಕು ಆದರೆ ಏಕೆ ಎಂದರೆ
ನಮ್ಮ ಪ್ರಪಂಚ ಇನ್ನಷ್ಟು ಶ್ರೀಮಂತ ಆಗಲಿ, ಸಮೃದ್ಧಿ
ಆಗಲಿ ಮಕ್ಕಳಿಗೆ ದೊಡ್ಡ ಶಿಕ್ಷಣ ಸಿಗಲಿ ,ಸೊಸೆ
ವಿದ್ಯಾವಂತೆ ಇರಲಿ.ಇಬ್ಬರೂ ಬಹಳಷ್ಟು ದುಡ್ಡು
ಗಳಿಸಿ ಆರಾಮ ಇರಲಿ.ಹೀಗೆಯೇ ಈ ನಿರಂತರ
ಕಥೆಯೇ ನಮ್ಮ ಜೀವನ ಆಗಿಬಿಟ್ಟಿದೆ.ಇದೇನೂ
ಯಾವಾಗಲೂ ಹೀಗೇಯೇ ಇರುತ್ತದೆ ಎಂದು
ತಿಳಿದಿದ್ದೇವೆ.ಈ ಜೀವನದಲ್ಲಿ ಎಷ್ಟು ದುಃಖಮಯ
ನೋವು ತುಂಬಿದ ಅನುಭವ ಇದ್ದರೂ ನಾವು ಇದರಿಂದ
ಪಾರಾಗುವ ದಾರಿ ಗೊತ್ತಾದರೂ ಆ ಕಡೆಗೆ ಪ್ರವೃತ್ತರಾಗುವದಿಲ್ಲ.
ಶ್ರೀ ಮಹಾರಾಜರು ಹೇಳುತ್ತಾರೆ ಈ ಪ್ರಪಂಚ ಎಂದರೆ
ಹಸಿಮಣ್ಣಿನ ಗೋಡೆ ಇದ್ದಂತೆ.ಎಷ್ಟೊಂದು ಅಪ್ರತಿಮ
ನೋಡಿ.ಸ್ವಚ್ಛಗೊಳಿಸಲು ಎಷ್ಟು ನೀರು ಹಾಕಿದರೂ
ರಾಡಿ ಹೊಲಸೇ ಬರುವದು.ಇನ್ನೂ ಹೇಳುತ್ತ ,
ಪ್ರತಿಯೊಬ್ಬರೂ ದಿನಕ್ಕೆ ಒಮ್ಮೆಯಾದರೂ ಹೋಗಿ
ವಿಸರ್ಜಿಸುವ ಮಲ ಯಾವ ಬಣ್ಣದ್ದಾದರೂ ಅದು
ಅದೇ ಹೊಲಸೇ ,ಅಂದರೆ ಪ್ರಪಂಚ ಎಂತಹದಾದರೇನು
ಶ್ರೀಮಂತರಾದಾದರೇನು ,ಬಡವರದಾದರೇನು
ವಿದ್ವಾಂಸರದಾದರೇನು, ಅಶಿಕ್ಷಿತರಾದರೇನು, ಎಲ್ಲವೂ
ಅಷ್ಟೇ.ಹೊಲಸು ಹೊಲಸೇ ಅಷ್ಟೇ,
ಇನ್ನು ಶ್ರೀ ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ,
ನಾವು ಎಷ್ಟು ಪ್ರಪಂಚದಲ್ಲಿ ಮುಳುಗಿದ್ದೇವೆ ಅಂದರೆ,
ಒಂದು ದಪ್ಪನಾದ ಹಾಸಿಗೆಗೆ ಕೆಳಗೆ ಬೆಂಕಿ ಹತ್ತಿದೆ,
ಆದರೆ ಮೇಲೆ ಅದರ ಅರಿವೇ ಇಲ್ಲದೇ ಗಡದ್ದಾಗಿ
ಗೊರಕೆ ಹೊಡೆಯುವವನ ಹಾಗೆ ಇದೆ, ಮೃತ್ಯು
ಯಾವ ಕ್ಷಣದಲ್ಲಿ ನಮ್ಮನ್ನು ಒಯ್ಯುತ್ತದೆಯೊ ಗೊತ್ತಿಲ್ಲ,
ಇನ್ನು ದುಖದ ಬಗ್ಗೆ ಹೇಳುತ್ತ ನೂರಾರು ಚೇಳುಗಳಿಂದ
ತುಂಬಿದ ಹಗೆ ಅಂದರೆ ಧಾನ್ಯ ಸಂಗ್ರಹ ಮಾಡುವ
ವ್ಯವಸ್ಥೆಯಲ್ಲಿ ನಾವು ಬಿದ್ದಹಾಗೆ ಈ ಪ್ರಪಂಚದಲ್ಲಿ
ಇರುವದು ,ಒಂದರ ನಂತರ ಒಂದು ದುಃಖ ಇದ್ದೇ
ಇರುತ್ತದೆ.,ಶ್ರೀ ಶಂಕರರು ಈ ಜಗತ್ತಿನಲ್ಲಿ ನಮ್ಮದು
ದೊಡ್ಡ ಗೊತ್ತಿಲ್ಲದ ಗೊಂಡಾರಣ್ಯದಲ್ಲಿ ಹೊರಟ
ಹಾಗಿದೆ ಎಂದಿದ್ದಾರೆ.ಶ್ರೀ ಮಹಾರಾಜರಂತೂ
ದುಃಖವೇ ಸುಖದ ಮುಸುಕು ಹಾಕಿಕೊಂಡು ನಮ್ಮ ಕಡೆ
ಬರುತ್ತದೆ ಎಂದಿದ್ದಾರೆ.ಪ.ಪೂ.ಗುರುಗಳು ಹೇಳುತ್ತಾರೆ
ಒಂದು ಕಣದ ಸುಖ ಅನುಭವಿಸಲು ಮಣಗಟ್ಟಲೇ
ದುಃಖದೊಳಗೆ ಇರುತ್ತೇವೆ ಎಂದಿದ್ದಾರೆ.ನಾವು ಈಗಾದರೂ ಈ ಜಗತ್ತು ದುಃಖಮಯ ಇದೆ ಎನ್ನುವ
ಗಟ್ಟಿಯಾದ ತಿಳುವಳಿಕೆ ಹೊಂದದಿದ್ದರೆ ಅದು ನಮ್ಮ
ದುರ್ದೈವವೇ ಸರಿ.ಇಂತಹ ಜಗತ್ತಿನಿಂದ ಪಾರಾಗಲು
ನಮ್ಮ ಜೀವನದ ಗುರಿ ಏನಾಗಬೇಕು ,ಯಾವ ದಾರಿ
ಹಿಡಿಯಬೇಕು........!!!
ಅವಧೂತ ತನಯ
*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"
ॐॐॐॐॐॐॐॐॐॐॐॐॐॐॐॐॐॐ