Friday, January 20, 2023

ವಾಸನಾ ಎಂದರೇನು?

 Study Circle- ಚಿಂತನಾ ಸರಣಿ -26 ದಿ.21-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ವಸ್ ಧಾತುವಿನಿಂದ ವಾಸನಾ ಶಬ್ದವಾಗಿರುತ್ತದೆ.

ಅಂದರೆ ಯಾವುದು ತೆಗೆದುಕೊಂಡು ಹೋಗಿ ದೃಶ್ಯದಲ್ಲಿ

ನಿಲ್ಲಿಸುತ್ತದೆಯೋ ಅದು ವಾಸನೆಯಾಗಿರುತ್ತದೆ.

ಯಾವುದು ನನಗೆ ಮನಸ್ಸಿನಲ್ಲಿ ಸ್ವಸ್ಥವಾಗಿ ಇರಗೊಡುವದಿಲ್ಲವೋ ,ನಮ್ಮನ್ನು ಹೊರಗೆ ನುಗಿಸಿ 

ದೃಶ್ಯದಲ್ಲಿ ಕೂಡಿಸುತ್ತದೆಯೊ ಅದು ವಾಸನೆ.ನಮ್ಮ

ಪ್ರವೃತ್ತಿಯ ,ಹೊರಗಿನಿಂದ ಸುಖ ಪಡೆಯುವ ಯಾವ

ಓಟ ಇರುತ್ತದೆಯೊ ಅದು ವಾಸನೆ.ಯಾವ ಯಾವ

ಇಂದ್ರಿಯಗಳಿಂದ ಯಾವ ಯಾವ ಭೋಗವಿರುತ್ತದೆ,

ಅವುಗಳಿಂದ ಸುಖ ಪ್ರಾಪ್ತವಾಗಬಹುದೆಂಬ ಯಾವ

ಆವೇಶವಿರುತ್ತದೆಯೋ ಅದೇ ವಾಸನೆಯಾಗಿರುತ್ತದೆ.

ಎಲ್ಲಿ ವಾಸನೆ ಇರುತ್ತದೆಯೊ ಅಲ್ಲಿ, ಅಜ್ಞಾನ, ಆಕುಂಚಿತ

ವೃತ್ತಿ ,ಬಂಧನ , ಹಾಗೂ ಸಣ್ಣತನಗಳು ಬಂದೇ ಬರುತ್ತವೆ.ಈ ಆಕುಂಚಿತ ಭಾವ ಬಂದೊಡನೆ ,ನಮ್ಮ

ಮೂಲ ಆನಂದ ಸ್ವರೂಪದ ಮೇಲೆ ಆವರಣ ನಿರ್ಮಾಣವಾಗಿ ಆನಂದಲೋಪ ವಾಗಿ ಮುಂದೆ

ಅಜ್ಞಾನದ ಕತ್ತಲೆ ಆವರಿಸಿ ದುಃಖದ ನಿರ್ಮಾಣ

ಆಗುತ್ತದೆ.ಈ ವಾಸನೆಗೆ ಭಗವಂತನ ಮಾಯೆ ಎಂದೂ

ಅನ್ನುತ್ತಾರೆ.ಇದು ಕತ್ತಲಿನ ಪ್ರತೀಕ, ಅಂದರೆ ಅಲ್ಲಿ

ಭಗವಂತನ ವಿಸ್ಮರಣೆ ಆಗುತ್ತದೆ.ಇದು ಭಗವಂತನ

ನೆರಳಿನಂತೆ ಇರುತ್ತದೆ.ಯಾವ ರೀತಿ ಮೋಡಗಳು 

ಸೂರ್ಯನನ್ನು ಮುಚ್ಚಿ ಅಂಧಕಾರ ಉಂಟು 

ಮಾಡುವವೊ ಹಾಗೆ ಈ ಮಾಯೆಯು ಭಗವಂತನ

ನೆರಳಿನಂತೆ ಇದ್ದು ನಮ್ಮಿಂದ ಭಗವಂತನನ್ನು ದೂರ

ಮಾಡುತ್ತದೆ.ಆದ್ದರಿಂದ ವಾಸನೆಗಳು ಭಗವಂತನವರೆಗೆ

ಮುಟ್ಟುತ್ತವೆ.ಆದ್ದರಿಂದ ನಮ್ಮ ಸ್ವ ಪ್ರಯತ್ನ, ಅಥವಾ

ಭಗವಂತನನ್ನು ಹೊರತು ಪಡಿಸಿ ಅನ್ಯ ಸಾಧನೆಗಳಿಂದ

ವಾಸನೆಯನ್ನು ನಿಯಂತ್ರಣ ಮಾಡಲು ಆಗುವದಿಲ್ಲ.

ಭಗವಂತನ ಅಥವಾ ಸದ್ಗುರುಗಳ ಅನುಗ್ರಹದ

ಸಹಾಯ ಇಲ್ಲದೆ ಈ ವಾಸನೆಯನ್ನು ಸರಿಸಿ ಭಗವಂತನ

ದರ್ಶನ ಮಾಡಲು ಆಗುವದಿಲ್ಲ.ಈ ಅನುಗ್ರಹ ಎಂದರೆ

ಭಗವಂತನ ಶಾರದಾ ಶಕ್ತಿ ಅಥವಾ ಜ್ಞಾನ ಶಕ್ತಿ.ಇದು

ಆನಂದರೂಪದ ಶಕ್ತಿ ಇರುವದರಿಂದ ಅಜ್ಞಾನ ಅಥವಾ

ಮಾಯೆಯ ಪ್ರಭಾವ ನಾಶ ಮಾಡುವದರಲ್ಲಿ ಇದರಷ್ಟು

ಪ್ರಬಲವಾದ ಉಪಾಯ ಬೇರೆ ಯಾವದೂ ಇಲ್ಲ.

"ಎಲ್ಲಿ ಭಗವಂತನ ನಾಮದ ವಿಸ್ಮರಣ"."ಅಲ್ಲಿ ಮಾಯೆಯ ಸ್ಫುರಣ, ಎಲ್ಲಿ ಅಖಂಡ ನಾಮದ ಸ್ಮರಣ ಅಲ್ಲಿ ಮಾಯೆಯ ಅಂದರೆ ವಾಸನೆಯ ಮರಣ"

ಈ ವಾಸನೆಯೆಂದರೆ ಮುದ್ದುಮಾಡಿದ ನಾಯಿಯಂತೆ

ಇರುತ್ತದೆ.ಸುಮ್ಮನೆ ಹಚ್ ಹಚ್ ಎಂದರೆ ಹೋಗುವುದಿಲ್ಲ.ಮನುಷ್ಯನಲ್ಲಿ ಈ ವಾಸನಾ ಶಕ್ತಿಯು

ಬೇಕು-ಬೇಡ ಎಂಬ ಭಾವನೆಗಳ ರೂಪದಲ್ಲಿ 

ವ್ಯಕ್ತವಾಗುತ್ತದೆ.ಆದರೆ ಜ್ಞಾನಶಕ್ತಿಯಾದ ಶಾರದೆಯು

ವಾಣಿಯ ರೂಪದಲ್ಲಿ ಪ್ರಕಟವಾಗುತ್ತದೆ.ವಾಸನೆ ಹಾಗೂ ಶಾರದಾ ಶಕ್ತಿ ಎರಡೂ ಸೂಕ್ಷ್ಮ , ಸರ್ವವ್ಯಾಪಿ 

ಹಾಗೂ ಸಾಮರ್ಥ್ಯವಾನ್ ಇರುತ್ತವೆ.ಇವು ಭಗವಂತನ

ಶಕ್ತಿಗಳೆ ಆದರೂ ಎರಡೂ ಶಕ್ತಿಗಳಲ್ಲಿ ಮಹತ್ವದ 

ಭೇದವಿರುತ್ತದೆ.ವಾಸನೆಯು ಅಧೋ ಅಂದರೆ ಕೆಳಮುಖವಾಗಿ ದೃಶ್ಯದ ಕಡೆಗೆ ಆದರೆ ,ಶಾರದೆಯು 

ಊರ್ಧ್ವಮುಖ ಅಂದರೆ ಅವ್ಯಕ್ತದ ಕಡೆಗೆ ಇರುತ್ತದೆ.

ವಾಸನೆಯಿಂದ ಉಪಾಧಿಗಳು ಬೆಳೆಯುತ್ತವೆ.

ಶಾರದೆಯಿಂದ ಉಪಾಧಿಗಳು ಕಡಿಮೆ ಆಗುತ್ತವೆ.

ವಾಸನೆಯು ಜೀವವನ್ನು ಆಕುಂಚಿತಗೊಳಿಸಿದರೆ,

ಶಾರದೆಯು ಅದನ್ನು ವಿಶಾಲಗೊಳಿಸುತ್ತದೆ.ಯಾವದು

ಅಂತಃಕರಣದಲ್ಲಿ ಸೇರಿಕೊಂಡು ಬಂಧನವನ್ನು

ಉಂಟು ಮಾಡುತ್ತದೆಯೊ ಅದು ವಿಷಯವಾಗಿರುತ್ತದೆ.

ಯೋಗವಾಸಿಷ್ಠದಲ್ಲಿ ಶುಭವಾಸನೆ ಮತ್ತು ಅಶುಭವಾಸನೆ ಎಂದು ಹೇಳಿ ಈ ಎರಡೂ ವಾಸನೆಗಳು

ದೂರವಾಗಬೇಕೆಂದು ಹೇಳಿರುತ್ತಾರೆ.ಅಂದರೆ 

ಈ ಬಂಧನದ ಪಾಶ ಎಷ್ಟೊಂದು ಸೂಕ್ಷ್ಮವಾಗಿರುತ್ತದೆ

ನೋಡಿರಿ.ಕಾಮವಾಸನೆ, ದುಡ್ಡಿನವಾಸನೆ, ಹಾಗೂ 

ಲೌಕಿಕದ ವಾಸನೆ ಈ ಮೂರು ವಾಸನೆಗಳಲ್ಲಿಯೆ

ನಾವು ಸುತ್ತುವರಿಯುತ್ತ ಇರುತ್ತೇವೆ.ಇವುಗಳನ್ನು

ಮನಸ್ಸಿನಿಂದ ನಿರ್ಮೂಲ್ಯ ಭಾವದಿಂದ ಉಪೇಕ್ಷೆ

ಮಾಡುವುದೇ ವೈರಾಗ್ಯವಾಗಿರುತ್ತದೆ.ಹಾಗೆಂದು

ವ್ಯವಹಾರದಲ್ಲಿ ಉಪೇಕ್ಷೆ ಮಾಡಬೇಕು ಅನ್ನುವದಲ್ಲ.

ನಿರ್ಮೂಲ್ಯ ಭಾವ ಎಂದರೆ ಅವು ಬೇಕಾರ ಅಂದರೆ

ಭಗವಂತನ ದರ್ಶನ ಮಾರ್ಗಕ್ಕೆ ನಿರುಪಯೋಗಿ

ಆಗಿರುತ್ತವೆ.ಇದಕ್ಕೆ ಒಂದು ಉದಾಹರಣೆ ಏನೆಂದರೆ,

ಒಬ್ಬನು ಚಾತುರ್ಮಾಸದಲ್ಲಿ ತಲೆ ಕೂದಲು ಹಾಗೂ ಗಡ್ಡ ಬೆಳೆಸಿದನು.ಅವುಗಳಿಗೆ ಎಣ್ಣೆ ಹಚ್ಚಿ ಉಪಚಾರ

ಮಾಡಿ ಬೆಳೆಸಿದನು.ಚಾತುರ್ಮಾಸ ಮುಗಿದ ನಂತರ

ಅವುಗಳನ್ನು ಸಂಪೂರ್ಣ ತೆಗೆಸಿದನು, ಆಗ ಆ ತೆಗೆದ

ಕೂದಲುಗಳನ್ನು ಎಷ್ಟು ತುಚ್ಛತೆಯಿಂದ ನೋಡುತ್ತಾನೆ.

ಅವನ್ನೇನು ತೆಗೆದಿಟ್ಟುಕೊಳ್ಳುವನೇ ,ಇಲ್ಲ.ಹಾಗೆ ನಾವೇ

ಆಟವಾಡಿದ ಈ ಪ್ರಪಂಚದ ಕಡೆಗೆ ನಮ್ಮದೇ ದೃಷ್ಟಿಯಲ್ಲಿ ಆ ತೆಗೆದ ಕೂದಲಿನ ಕಡೆಗೆ ಎಷ್ಟು ತುಚ್ಛತೆ

ಭಾವ ಇರುವುದೊ ಅದೇ ಭಾವದಿಂದ ನೋಡುವ ಕಲೆ

ಬರಬೇಕು.ಇದು ನಿಜವಾದ ವೈರಾಗ್ಯವಾಗಿರುತ್ತದೆ.

ಇದಕ್ಕಾಗಿ ಮನೆ ಮಾರು ಹೆಂಡತಿ ಮಕ್ಕಳು ,ಎಲ್ಲ ಬಿಟ್ಟು

ಅರಣ್ಯಕ್ಕೆ ಹೋಗುವುದೇನೂ ಬೇಕಾಗಿಲ್ಲ.ಪ್ರಪಂಚ,

ಪರಿಸ್ಥಿತಿ, ಜಗತ್ತಿನ ಕಡೆಗೆ ನೋಡುವ ನಮ್ಮ ದೃಷ್ಟಿ

ಬದಲಾಗಬೇಕು.ಇದೆನೊ ಅಂದಷ್ಟು ಸುಲಭವಲ್ಲ.

ಈ ವಾಸನೆಗಳ ತ್ಯಾಗದ ಅಭ್ಯಾಸವೇ ನಾಮಸಾಧನೆ

ಆಗಿರುತ್ತದೆ.

ನಾಮ ಎಂದರೆ ಏನು, ನಾಮಸಾಧನೆ ಏನಿರುತ್ತದೆ?!!!..

ಅವಧೂತ ತನಯ

*" ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Saturday, January 14, 2023

ಜೀವನದ ಗುರಿ ಏನು ಇರಬೇಕು ?

 Study Circle- ಚಿಂತನಾ ಸರಣಿ -8, ದಿ.14-12-22

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ನಾವು ಚಿಕ್ಕವರಿದ್ದಾಗ ಅಂದರೆ 5,6ಅಥವಾ7 ಕ್ಲಾಸ್

ಓದುತ್ತಿರುವಾಗ ,ಏನಾದರೂ ವಿಷಯಕೊಟ್ಟು ಅದರ

ಮೇಲೆ ಒಂದು ಪುಟದಷ್ಟು ಪ್ರಬಂಧ ಬರೆಯಲು

ಹೇಳುತ್ತಿದ್ದರು.ಅಂತಹ ಒಂದು ವಿಷಯ ಒಂದು ಇತ್ತು

ಅದೇನೆಂದರೆ " ಜೀವನದ ಗುರಿ ಏನು ಇರಬೇಕು ?

ಅದಕ್ಕೆ ಸಾಮಾನ್ಯವಾಗಿ ಹೇಳುವಾಗ "ಗುರಿ ಇಲ್ಲದ

ಜೀವನ ಎಂದರೆ ,ಗಾಳಿಪಟ ಅಥವಾ ಯಾವದೇ ದಿಕ್ಕು ದೆಸೆ ಇಲ್ಲದ ಸಮುದ್ರದಲ್ಲಿ ಹೊರಟ ಹಡಗಿನಂತೆ.

ಅದು ಯಾವ ದಡ ಮುಟ್ಟುತ್ತದೆ ಗೊತ್ತಿಲ್ಲ ಅಥವಾ 

ಸಮುದ್ರದ ಯಾವದೋ ಭಾಗದಲ್ಲಿ ಯಾವಾಗ

ಮುಳುಗುತ್ತದೆ ಗೊತ್ತಿಲ್ಲ.ಹಾಗೆಯೆ ನಿರ್ದಿಷ್ಟ ಗುರಿ ಅಥವಾ ಏನಾದರೂ ಸಾಧಿಸಬೇಕು ಎಂಬ ನಿರ್ಧಾರ

ಇಲ್ಲದ ಜೀವನದ ಗತಿ ಹೀಗೆಯೇ ಆಗುತ್ತದೆ. 

ಪ.ಪೂ.ಗುರುಗಳು ಹೇಳುತ್ತಾರೆ, ಈಗ ನಾವು ಹೇಗೆ

ಆಗಿದ್ದೇವೆ ಎಂದರೆ ಎಂದೂ ಮುಗಿಯದ ಈ ಪ್ರಪಂಚದ ಕಥೆಯಲ್ಲಿಯೆ ನಾವು ರಮಿಸುತ್ತೇವೆ, ಅದರಲ್ಲಿಯೆ ನಮ್ಮ ಜೀವನ ಸಾರ್ಥಕ ಎಂದುಕೊಂಡು

ಹೊರಟು ಬಿಟ್ಟಿದ್ದೇವೆ.ಹುಟ್ಟಿದಾರಭ್ಯ ಇಂದಿನವರೆಗೂ

ಒಂದು ಸಲವಾದರೂ ಸುಮ್ಮನೆ ಏಕಾಂತದಲ್ಲಿ ಕುಳಿತು

ಏಕೆ , ಹೇಗೆ ಹುಟ್ಟಿದ್ದೇವೆ? ಏಲ್ಲಿಗೆ ಹೀಗೆ ಹೋಗುತ್ತೇವೆ?

ಇದರ ಬಗೆಗೆ ಒಮ್ಮೆಯಾದರೂ ವಿಚಾರ ಮಾಡಿರುತ್ತೇವೆಯೇ,ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳೋಣ.ಎಂದೂ ಮುಗಿಯದ ಕಥೆ ಎಂದರೇನು ನೋಡೋಣ.

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು.ಅವನಿಗೆ ಕಥೆ ಕೇಳುವ ಬಯಕೆ ಆಯಿತು.ಅದೂ ಕೂಡಾ ನಿರಂತರ 

ಅಂದರೆ ಮುಗಿಯದೇ ಇರುವ ಕಥೆ ಇರಬೇಕು.ಅಂತಹ

ಕಥೆ ಹೇಳುವವರಿಗೆ ಲಕ್ಷ ಬಂಗಾರದ ವರಾಹ ಕೊಡುವದಾಗಿ ರಾಜ್ಯದಲ್ಲಿ ಡಂಗುರ ಸಾರಿಸಿದ.

ಪ್ರವಚನ ಕಾರರು,ಕಥಾಕಾರರು.ನಾನಾ ಜನ ಬಂದು,

ರಾಮಾಯಣ, ಮಹಾಭಾರತ, ಭಾಗವತ, ಹದಿನೆಂಟು

ಪುರಾಣ ಎಲ್ಲವೂ ಮುಗಿದವು.ಇನ್ನೂ ಏನು ಹೇಳಬೇಕು ಎಂದು ಈ ವಿದ್ವಾಂಸರು ,ಪಂಡಿತರು ಸಭೆ

ಮಾಡಿ ಚಿಂತನೆ ಮಾಡತೊಡಗಿದರು ನಿರಂತರ

ಎಂದೂ ಮುಗಿಯದ ಕಥೆ ಎಂದರೆ ಎಂತಹದು 

ಎನ್ನುವ ವಿಚಾರಕ್ಕೆ ತೊಡಗಿದರು.ಇವರ ಈ ಸಭೆಯ

ಗದ್ದಲಕ್ಕೆ ಅಲ್ಲಿಯೇ ಇದ್ದ ಹಿರಿಯ ವಯಸ್ಸಾದ ಒಕ್ಕಲಿಗ ರೈತನೊಬ್ಬ ಅಲ್ಲಿಯ ಪಂಡಿತರನ್ನು ವಿಚಾರಿಸಿದ, ಅವರು ರಾಜ ಹೇಳಿದ ವಿಚಾರ ಹೇಳಿದರು.ಆಗ ಅವನು ನಾನು ಅಂತಹ ಕಥೆ 

ಹೇಳುತ್ತೇನೆ ನನ್ನನ್ನು ರಾಜನ ಕಡೆಗೆ ಕರೆದೊಯ್ಯಿರಿ

ಎಂದು ಹೇಳಿದ.ಅದನ್ನೂ ಈ ಪಂಡಿತರು ಹಾಸ್ಯ

ಮಾಡಿದರು.ಅವನೇನು ಅವರನ್ನು ಪರಿಗಣಿಸದೆ 

ನೀವು ಕರೆದುಕೊಂಡು ಹೋಗಿ ರಾಜನನ್ನು

ಭೆಟ್ಟಿ ಮಾಡಿಸಿ ನೋಡಿರಿ ಎಂದ.ಆಯಿತು ಎಂದು

ಅವನನ್ನು ರಾಜನ ಕಡೆಗೆ ಕರೆದುಕೊಂಡು ಹೋದರು.

ರಾಜನೂ ಆಶ್ಚರ್ಯದಿಂದ ಇವನ ಕಡೆ ನೋಡಿದ.ಅವನು ಮಹಾರಾಜರೇ ಒಂದು ಅವಕಾಶ

ಕೊಟ್ಟು ನೋಡಿರಿ ಎಂದು ಹೇಳಿದ.ರಾಜ ಮಂತ್ರಿಯ

ಕಡೆ ನೋಡಿದ.ಮಂತ್ರಿ ಕೊಡಿರಿ ಎಂದು ಹೇಳಿದ.

ಆಯಿತು ಹೇಳು ಎಂದು ರಾಜ ಹೇಳಿದ.ಅದಕ್ಕೆ ಅವನು

ನೋಡಿ ಮಹಾರಾಜರೇ ಕಥೆ ಹೇಳುವವರು 

ಮೇಲೆ ಕೂಡಬೇಕು ,ಕೇಳುವವರು ಕೆಳಗೆ ಕೂಡಬೇಕು

ಅಲ್ಲವೇ ಅಂತ ಅಂದ.ಆಯಿತು ಎಂದು ಅವನಿಗೆ 

ಸಿಂಹಾಸನ ಬಿಟ್ಟು ಕೆಳಗೆ ಕುಳಿತ.ನೋಡಿ ರಾಜರೇ

ಇದು ಏನೊ ಸರಿ ಆದರೆ ತಲೆಯ ಮೇಲಿ ಕಿರೀಟ 

ಇಟ್ಟುಕೊಂಡು ಹೇಳುವವರಿಗಿಂತ ಕೇಳುವವರು ಕುಳಿತರೆ ತಪ್ಪಲ್ಲವೇ ಅಂದ ,ಆಯಿತು ಎಂದು ಕಿರೀಟ 

ತೆಗೆದು ರಾಜ ಕುಳಿತ.ರಾಜರೆ ಕಥೆ ಆರಂಭದ

ಮುನ್ನ ಕಥೆ ಹೇಳುವವರಿಗೆ ಶಾಲು ಸನ್ಮಾನ ಮಾಡಿ

ಹಾರ ,ಟೋಪಿ ಹಾಕುವರು ಎಂದು ಕೇಳಿದ್ದೇನೆ ಎಂದ

,ರಾಜ ಇದೇನೂ ಸ್ವಲ್ಪ ಅತಿ ಆಯಿತು ಎನಿಸಿ ಮಂತ್ರಿಯ

ಕಡೆಗೆ ನೋಡಿದ, ಅದಕ್ಕೆ ಮಂತ್ರಿ ಕಥೆ ಕೇಳಬೇಕು

ಅಂದರೆ ಕಥಾಕಾರರಿಗೆ ಸನ್ಮಾನ ಮಾಡಬೇಕು ಎಂದು

ಹೇಳಿದ.ಅದೂ ಆಯಿತು ಇನ್ನಾದರೂ ಕಥೆ 

ಪ್ರಾರಂಭ ಮಾಡು ಎಂದು.ಆಯಿತು ಎಂದು ಹೇಳಿ,

ಒಂದು ಊರಿನಲ್ಲಿ ಒಬ್ಬನಿದ್ದ.ಅವನು ಮದುವೆ 

ವಯಸ್ಸಿಗೆ ಬಂದ ಅವನ ತಂದೆ ತಾಯಿ ಅವನಿಗೆ

ಮದುವೆ ಮಾಡಿದರು.ಮುಂದೆ ಅವನಿಗೆ ಒಬ್ಬ ಮಗ

ಹುಟ್ಟಿದ, ಅವನೂ ಶಾಲೆ ವಿದ್ಯೆ ಕಲಿತು ಕೆಲಸ

ಪ್ರಾರಂಭಿಸಿದ, ಅವನು ವಯಸ್ಸಿಗೆ ಬಂದ ಕೂಡಲೆ

ತಂದೆ ತಾಯಿ ಅವನಿಗೆ ಕನ್ಯಾ ಶೋಧ ಮಾಡಿ

ಮದುವೆ ಮಾಡಿದರು.ಮುಂದೆ ಎರಡು ಮೂರು

ವರ್ಷ ನಂತರ ಅವನಿಗೂ ಮಕ್ಕಳಾದವು.

ಅವೂ ಹೀಗೆಯೆ ಬೆಳೆದು ವಯಸ್ಸಿಗೆ ಬಂದವು, ಮಗಳಿಗೆ ವರ ನೋಡಿ ಮದುವೆ ಮಾಡಿದ .ನಂತರ

ಮಗನಿಗೂ ಮದುವೆ ಮಾಡಿದ.ಮುಂದೆ ಅವರಿಗೆ 

ಮಕ್ಕಳಾದವು ,ಅವೂ ಬೆಳೆದು ವಯಸ್ಸಿಗೆ ಬಂದವು,

ಅವರಿಗೂ ಮದುವೆ ಆಯಿತು, ಮತ್ತೆ ಅವರಿಗೆ

ಮಕ್ಕಳಾದವು..ರಾಜ ಮಂತ್ರಿಗೆ ಹೇಳಿದ ಇವನಿಗೆ

ಬಹುಮಾನದ ಹಣ ಕೊಟ್ಟುಕಳಿಸು ಎಂದು.

ಹೀಗೇಯೇ ನಮ್ಮದೂ ಇರುತ್ತದೆ.ನಮ್ಮ ಹಿಂದಿನವರು

ಮದುವೆ ಆದರು ಅವರ ಮಕ್ಕಳು ಮುಂದೆ ದೊಡ್ಡವರಾಗಿ ಮದುವೆ ಆದರು ಅವರಿಗೆ ನಾವು ಹುಟ್ಟಿ

ಮುಂದೆ ಹೀಗೆಯೇ ಈ ಕಥೆ ನಡೆದೇ ಇರುತ್ತದೆ.

ನಮಗೆ ಈ ನಿರಂತರ ಕಥೆಯಲ್ಲಿಯೇ ಜೀವನ ರಮಿಸುತ್ತದೆ.ದೇವರು ಬೇಕು ಆದರೆ ಏಕೆ ಎಂದರೆ

ನಮ್ಮ ಪ್ರಪಂಚ ಇನ್ನಷ್ಟು ಶ್ರೀಮಂತ ಆಗಲಿ, ಸಮೃದ್ಧಿ

ಆಗಲಿ ಮಕ್ಕಳಿಗೆ ದೊಡ್ಡ ಶಿಕ್ಷಣ ಸಿಗಲಿ ,ಸೊಸೆ

ವಿದ್ಯಾವಂತೆ ಇರಲಿ.ಇಬ್ಬರೂ ಬಹಳಷ್ಟು ದುಡ್ಡು

ಗಳಿಸಿ ಆರಾಮ ಇರಲಿ.ಹೀಗೆಯೇ ಈ ನಿರಂತರ

ಕಥೆಯೇ ನಮ್ಮ ಜೀವನ ಆಗಿಬಿಟ್ಟಿದೆ.ಇದೇನೂ

ಯಾವಾಗಲೂ ಹೀಗೇಯೇ ಇರುತ್ತದೆ ಎಂದು

ತಿಳಿದಿದ್ದೇವೆ.ಈ ಜೀವನದಲ್ಲಿ ಎಷ್ಟು ದುಃಖಮಯ

ನೋವು ತುಂಬಿದ ಅನುಭವ ಇದ್ದರೂ ನಾವು ಇದರಿಂದ

ಪಾರಾಗುವ ದಾರಿ ಗೊತ್ತಾದರೂ ಆ ಕಡೆಗೆ ಪ್ರವೃತ್ತರಾಗುವದಿಲ್ಲ.

ಶ್ರೀ ಮಹಾರಾಜರು ಹೇಳುತ್ತಾರೆ ಈ ಪ್ರಪಂಚ ಎಂದರೆ

ಹಸಿಮಣ್ಣಿನ ಗೋಡೆ ಇದ್ದಂತೆ.ಎಷ್ಟೊಂದು ಅಪ್ರತಿಮ

ನೋಡಿ.ಸ್ವಚ್ಛಗೊಳಿಸಲು ಎಷ್ಟು ನೀರು ಹಾಕಿದರೂ

ರಾಡಿ ಹೊಲಸೇ ಬರುವದು.ಇನ್ನೂ ಹೇಳುತ್ತ ,

ಪ್ರತಿಯೊಬ್ಬರೂ ದಿನಕ್ಕೆ ಒಮ್ಮೆಯಾದರೂ ಹೋಗಿ

ವಿಸರ್ಜಿಸುವ ಮಲ ಯಾವ ಬಣ್ಣದ್ದಾದರೂ ಅದು

ಅದೇ ಹೊಲಸೇ ,ಅಂದರೆ ಪ್ರಪಂಚ ಎಂತಹದಾದರೇನು

ಶ್ರೀಮಂತರಾದಾದರೇನು ,ಬಡವರದಾದರೇನು

ವಿದ್ವಾಂಸರದಾದರೇನು, ಅಶಿಕ್ಷಿತರಾದರೇನು, ಎಲ್ಲವೂ

ಅಷ್ಟೇ.ಹೊಲಸು ಹೊಲಸೇ ಅಷ್ಟೇ,

ಇನ್ನು ಶ್ರೀ ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ,

ನಾವು ಎಷ್ಟು ಪ್ರಪಂಚದಲ್ಲಿ ಮುಳುಗಿದ್ದೇವೆ ಅಂದರೆ,

ಒಂದು ದಪ್ಪನಾದ ಹಾಸಿಗೆಗೆ ಕೆಳಗೆ ಬೆಂಕಿ ಹತ್ತಿದೆ,

ಆದರೆ ಮೇಲೆ ಅದರ ಅರಿವೇ ಇಲ್ಲದೇ ಗಡದ್ದಾಗಿ

ಗೊರಕೆ ಹೊಡೆಯುವವನ ಹಾಗೆ ಇದೆ, ಮೃತ್ಯು 

ಯಾವ ಕ್ಷಣದಲ್ಲಿ ನಮ್ಮನ್ನು ಒಯ್ಯುತ್ತದೆಯೊ ಗೊತ್ತಿಲ್ಲ,

ಇನ್ನು ದುಖದ ಬಗ್ಗೆ ಹೇಳುತ್ತ ನೂರಾರು ಚೇಳುಗಳಿಂದ

ತುಂಬಿದ ಹಗೆ ಅಂದರೆ ಧಾನ್ಯ ಸಂಗ್ರಹ ಮಾಡುವ

ವ್ಯವಸ್ಥೆಯಲ್ಲಿ ನಾವು ಬಿದ್ದಹಾಗೆ ಈ ಪ್ರಪಂಚದಲ್ಲಿ

ಇರುವದು ,ಒಂದರ ನಂತರ ಒಂದು ದುಃಖ ಇದ್ದೇ

ಇರುತ್ತದೆ.,ಶ್ರೀ ಶಂಕರರು ಈ ಜಗತ್ತಿನಲ್ಲಿ ನಮ್ಮದು

ದೊಡ್ಡ ಗೊತ್ತಿಲ್ಲದ ಗೊಂಡಾರಣ್ಯದಲ್ಲಿ ಹೊರಟ

ಹಾಗಿದೆ ಎಂದಿದ್ದಾರೆ.ಶ್ರೀ ಮಹಾರಾಜರಂತೂ

ದುಃಖವೇ ಸುಖದ ಮುಸುಕು ಹಾಕಿಕೊಂಡು ನಮ್ಮ ಕಡೆ

ಬರುತ್ತದೆ ಎಂದಿದ್ದಾರೆ.ಪ.ಪೂ.ಗುರುಗಳು ಹೇಳುತ್ತಾರೆ

ಒಂದು ಕಣದ ಸುಖ ಅನುಭವಿಸಲು ಮಣಗಟ್ಟಲೇ

ದುಃಖದೊಳಗೆ ಇರುತ್ತೇವೆ ಎಂದಿದ್ದಾರೆ.ನಾವು ಈಗಾದರೂ ಈ ಜಗತ್ತು ದುಃಖಮಯ ಇದೆ ಎನ್ನುವ

ಗಟ್ಟಿಯಾದ ತಿಳುವಳಿಕೆ ಹೊಂದದಿದ್ದರೆ ಅದು ನಮ್ಮ

ದುರ್ದೈವವೇ ಸರಿ.ಇಂತಹ ಜಗತ್ತಿನಿಂದ ಪಾರಾಗಲು

ನಮ್ಮ ಜೀವನದ ಗುರಿ ಏನಾಗಬೇಕು ,ಯಾವ ದಾರಿ

ಹಿಡಿಯಬೇಕು........!!!

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"

ॐॐॐॐॐॐॐॐॐॐॐॐॐॐॐॐॐॐ

Saturday, January 7, 2023

ನಿಮ್ಮಲ್ಲಿರಲಿ ತ್ಯಾಗದ ಬಲ,ನಿಮ್ಮಲ್ಲಿರಲಿ ತ್ಯಾಗದ ಬಲ

 Study Circle- ಚಿಂತನಾ ಸರಣಿ -25 ದಿ.07-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

"ನಿಮ್ಮಲ್ಲಿರಲಿ ತ್ಯಾಗದ ಬಲ,ನಿಮ್ಮಲ್ಲಿರಲಿ ತ್ಯಾಗದ ಬಲ"

ಎಂದು ಶ್ರೀ ಮಹಾರಾಜರು ಹೇಳುತ್ತಾರೆ.ನಾವು ಇದನ್ನು

ನಿತ್ಯೋಪಾಸನೆಯ ಪಂಚಪದಿ ಭಜನೆಯಲ್ಲಿ 

ದಿನಾಲೂ ಹೇಳುತ್ತೇವೆ..

ಭಗವಂತನು ಈ ಜಗತ್ತಿನಲ್ಲ ಇಂದ್ರಿಯಗಳ ಮೂಲಕ

ಸುಖ ಅನುಭವಿಸುವ ಸೌಲಭ್ಯ ಏಕೆ ಕೊಟ್ಟಿರುತ್ತಾನೆ.

ಈ ಕಡೆಯಲ್ಲಿ ಕೊಟ್ಟು ಇನ್ನೊಂದು ಕಡೆ ಅದನ್ನು ಬಿಡಿ

ಅಂದರೆ ನನ್ನ ಕಡೆಗೆ ಬರುತ್ತೀರಿ ಎಂದು ಹೇಳುತ್ತಾನೆ.

ಇದಕ್ಕೆ ಶ್ರೀ ಮಹಾರಾಜರು ಎಷ್ಟು ಸುಂದರವಾಗಿ

ಹೇಳಿರುತ್ತಾರೆ ಎಂದರೆ, ಒಬ್ಬನು ಒಂದು ಪರೀಕ್ಷೆಗಾಗಿ

ಮುಂಬಯಿಗೆ ಸ್ವಲ್ಪದಿನ ಹೋಗಬೇಕಾಯಿತು.

ಹೋಗುವಾಗ ಕಷ್ಟಪಟ್ಟು ಹೋಗಬೇಕಾಯಿತು.ರಾತ್ರಿ

ನಿದ್ದಗೆಡಬೇಕಾಯಿತು.ಹೋಗಿ ಎರಡು ದಿನ ಇದ್ದು

ಪರೀಕ್ಷೆ ಮುಗಿಸಿದನು.ಎಲ್ಲೂ ಹೊರಗಡೆ ಹೋಗಲಿಲ್ಲ.

ಅಭ್ಯಾಸ ಮಾಡುವದಿತ್ತು ಎಂದು.ನಂತರ ಪರೀಕ್ಷೆ

ಮುಗಿಯಿತು ,ಉತ್ತೀರ್ಣನಾದ ಫಲಿತಾಂಶವೂ ಬಂದಿತು.ನಂತರ ನಾಲ್ಕಾರು ದಿನ ಇದ್ದು ಆರಾಮವಾಗಿ

ಮುಂಬಯಿ ತಿರುಗಾಡಿ ನೋಡಿ ವಾಪಸ್ ಬಂದನು.

ಹೀಗೆಯೇ ನಾವು ಯಾವ್ಯಾವದೊ ಪರಿಸ್ಥಿತಿಯಲ್ಲಿ

ಹುಟ್ಟಿ ಬಂದಿರುತ್ತೇವೆ.ಕಷ್ಟಪಟ್ಟು ಜೀವನ ಮಾಡುತ್ತೇವೆ.

ಆದರೆ ಹುಟ್ಟಿಬಂದ ಉದ್ದೇಶ ಅಂದರೆ ಭಗವಂತನ

ಅನುಭವ ,ಸಾಕ್ಷಾತ್ಕಾರ ಪಡೆದು ಜೀವನದ ಪರೀಕ್ಷೆ

ಮುಗಿಸಿದರೆ ನಂತರ ಉಳಿದ ಜೀವನದಲ್ಲಿ ಎಷ್ಟೆ

ಅನುಭವಿಸಲಿ ಅವು ನಮ್ಮನ್ನು ಬಾಧಿಸುವದಿಲ್ಲ.ಇನ್ನು

ಈ ಜಗತ್ತಿನಲ್ಲಿ ಸುಖ ಅನುಭವಿಸುವ ಸೌಲಭ್ಯಗಳು

ಇರದಿದ್ದರೆ ಮನುಷ್ಯನು ಕರ್ಮದಲ್ಲಿ ಪ್ರವೃತ್ತನೇ

ಆಗುತ್ತಿರಲಿಲ್ಲ ಎಂದು ಸತ್ಪುರುಷರು ಹೇಳುತ್ತಾರೆ.

ಉಪನಿಷತ್ತಿನಲ್ಲಿ ,ಈ ಇಂದ್ರಿಯಗಳು ಸದಾ ನಮ್ಮ

ಮನಸ್ಸನ್ನು ಹೊರಗೇ ಎಳೆಯುವಂತೆ ಬ್ರಹ್ಮದೇವರು

ಸೃಷ್ಟಿ ಮಾಡಿರುತ್ತಾನೆ ಎಂದು ಹೇಳಿರುತ್ತಾರೆ.

ಇದೆಲ್ಲ ಇರಲಿ. ಈ ವಾಸನಾ ತ್ಯಾಗಕ್ಕೆ ಎಷ್ಟು ಬಲ

ಇರಬೇಕು, ಹೇಗೆ ಸಾಧಿಸಬಹುದು.? ನಂತರ ಬರುವ

ಬ್ರಹ್ಮ ಬಲ ಅಂದರೆ ಆತ್ಮಜ್ಞಾನದ ಬಲ ಹೇಗಿರಬಹುದು."ಕರ್ತುಂ ಅಕರ್ತುಂ ಅನ್ಯಥಾ ಕರ್ತುಂ"

ಸಾಮರ್ಥವುಳ್ಳ ಆತ್ಮಜ್ಞಾನಿಗಳು ಭಾರತೀಯ

ಸನಾತನ ಪರಂಪರೆಯಲ್ಲಿ ಈಗಲೂ ಇದ್ದಾರೆ.ನಮಗೆ

ಅವರು ಕಾಣಿಸುವದಿಲ್ಲ ಅಷ್ಟೆ.ಇಂತಹ ಅದ್ಭುತ

ಸಾಮರ್ಥ್ಯ ವಾಸನಾ ತ್ಯಾಗದಿಂದ ಆಗುವ ಬ್ರಹ್ಮಜ್ಞಾನ

ಅಥವಾ ಆತ್ಮಜ್ಞಾನದಿಂದ ,ನಂತರ ಗುರುಗಳು ಹೇಳಿದ

ಪ್ರಕಾರ ಮಾಡುವ ಅಭ್ಯಾಸದಿಂದ ಬರುತ್ತದೆ.

ಹುಬ್ಬಳ್ಳಿ ಕಡೆಯಿಂದ ಬಂದ ಕೆಲವು ಭಕ್ತರು ವಾಪಸ್

ಹೊರಟಿದ್ದರು.ಶ್ರೀ ಮಹಾರಾಜರು ಹರಿಪಂತ ಮಾಸ್ತರರಿಗೆ ,ತಮ್ಮ ಹಾಸಿಗೆಯ ಕೆಳಗೆ ನೋಡಿ

ಅಲ್ಲಿ ಇರುವದನ್ನು ತರಲು ಹೇಳಿದರು.ಅದಕ್ಕೆ ಪಂತರು,

ಈಗ ತಾನೆ ಎಲ್ಲ ಝಾಡಿಸಿ ಸ್ವಚ್ಛ ಮಾಡಿ ಹಾಸಿದ್ದೇನೆ

ಮಹಾರಾಜ ಅಲ್ಲಿ ಏನೂ ಇಲ್ಲ.ಎಂದರು.ಅದಕ್ಕೆ

ಶ್ರೀ ಮಹಾರಾಜರು ,ನಿಮ್ಮ ಬುದ್ಧಿ ಇರಲಿ ನಾನು 

ಹೇಳಿದ್ದೇನೆ ಇನ್ನೊಮ್ಮೆ ನೋಡಿರಿ ಎಂದರು.ಆಗ

ಮಾಸ್ತರರು ನೋಡಿದಾಗ ಅಲ್ಲಿ ಒಂದಷ್ಟು ದುಡ್ಡು ಹಾಗೂ ಹೆಣ್ಣು ಮಕ್ಕಳಿಗೆ ಕೊಡಲು ಸ್ವಲ್ಪ ಖಣ ಇದ್ದವು.

ಅವರು ತಂದುಕೊಟ್ಟರು,.ಹೀಗೆ ಆತ್ಮಜ್ಞಾನಿಗಳ ಶಬ್ದ

ಸಾಮರ್ಥ್ಯ ಇರುತ್ತದೆ.ಸಚ್ಚಿದಾನಂದ ಸ್ವರೂಪರೇ

ಆಗಿದ್ದರು ಶ್ರೀ ಮಹಾರಾಜರು.ಅವರು ಎಷ್ಟು

ನಿರ್ವಾಸಿತರಾಗಿದ್ದರು ಎಂದರೆ, ಕೊನೆಗೆ ದೇಹ ಬಿಡುವಾಗ ಶ್ರೀ ರಾಮನ ಪೂಜೆ ಮುಂದೆ ಹೇಗೆ ಎಂಬ

ವಿಚಾರವೂ ಅವರಿಗೆ ಇರಲಿಲ್ಲ ಎಂದು ಪ.ಪೂ.ಗುರುಗಳು ಹೇಳಿದರು.ಅಸ್ತು.

"ಯಾವುದು ಮನಸ್ಸನ್ನು ತೆಗೆದುಕೊಂಡು ಹೋಗಿ

ವಿಷಯದಲ್ಲಿ ಮುಳುಗಿಸುವದೊ ಅದು ವಾಸನೆ

ಆಗಿರುತ್ತದೆ.ಯಾವುದರಲ್ಲಿ ಮನಸ್ಸು ಹಾಗೂ

ಇಂದ್ರಿಯಗಳು ಮುಳುಗುವವೊ ಅದು ವಿಷಯ

ಆಗಿರುತ್ತದೆ."ಈ ವಾಸನೆಯು ಭಗವಂತನ ಕ್ರಿಯಾ

ಶಕ್ತಿಯೆ ಆಗಿರುತ್ತದೆ.ಅಂದರೆ ಭಗವಂತನ ನೆರಳು

ಆದ ಮಾಯೆಯೆ ವಾಸನೆಯಾಗಿರುತ್ತದೆ.ಇದನ್ನು

ಮಾಯೆ ಎಷ್ಟು ಪ್ರಬಲ ಇರುತ್ತದೆ ಅಂದರೆ, 

ಭಗವಂತನನ್ನು ಮುಚ್ಚಿ ,ಈ ಜಗತ್ತೇ ಸತ್ಯ, ಇಲ್ಲಿ

ಮಾಡುವ ಕೆಲಸಗಳೇ ನಮ್ಮ ನಿಜವಾದ ಕರ್ತವ್ಯ

ಎಂದು ಸುಖದ ಆಮಿಷ ಒಡ್ಡಿ ನಮ್ಮನ್ನು ದುಃಖದ

ಕೊಳ್ಳದಲ್ಲಿ ನಮಗರಿವಿಲ್ಲದಂತೆ ಒಗೆಯುತ್ತದೆ.

ಯಾವ ರೀತಿಯಲ್ಲಿ ಸೂರ್ಯನನ್ನು ಮೋಡಗಳು

ಮುಚ್ಚಿ ಕತ್ತಲೆ ಉಂಟು ಮಾಡುತ್ತವೆಯೊ ಅದೇ ರೀತಿ

ಭಗವಂತನನ್ನು ಮುಚ್ಚಿ ನಮ್ಮಲ್ಲಿ ಅಜ್ಞಾನದ ಅಂಧಕಾರ

ವನ್ನು ಮಾಯೆಯು ಅಂದರೆ ಈ ವಾಸನಾ ಶಕ್ತಿಯು

ಉಂಟು ಮಾಡಿರುತ್ತದೆ.ಮನಸ್ಸಿನಲ್ಲಿ ಬೇಕು ಅನ್ನುವ

ವೃತ್ತಿ ಪ್ರಕಟವಾದ ಕೂಡಲೇ ನಮಗೆ ಭಗವಂತನ

ವಿಸ್ಮರಣೆ ಆಗುತ್ತದೆ.ಇದು ನಮ್ಮನ್ನು ನಾನಾ ಪ್ರಕಾರದ ಕರ್ಮ ಮಾಡಲು ಹಚ್ಚುತ್ತದೆ.ಇಂಥ ಪ್ರಬಲವಾದ

ಮಾಯೆಯನ್ನು ನಮ್ಮ ಸಾಮರ್ಥ್ಯದಿಂದ ಗೆಲ್ಲುತ್ತೇವೆ

ಎನ್ನುವುದು ಅಸಾಧ್ಯವಾದದ್ದು.ಭಗವಂತನಿಗೆ ಶರಣು

ಹೋಗುವುದರಿಂದ ಮಾತ್ರ ಸಾಧ್ಯ.ಭಗವಂತನ

ಇನ್ನೊಂದು ಶಕ್ತಿ ಅಂದರೆ ಶಾರದಾ ಶಕ್ತಿಯ ಕೃಪೆ 

ಆದರೆ ಇದು ಸಾಧ್ಯ.ಇವೇ ಶಕ್ತಿಗಳು ಪ್ರತಿಯೊಬ್ಬರಲ್ಲೂ

ವಿದ್ಯಾ ಹಾಗೂ ಅವಿದ್ಯಾ ರೂಪದಲ್ಲಿ ಇರುತ್ತವೆ.

ಎಷ್ಟು ಹೆಚ್ಚು ನಮಗೆ ದೃಶ್ಯದಲ್ಲಿ ಆಸಕ್ತಿಯೊ ಅಷ್ಟು

ಹೆಚ್ಚು ಅವಿದ್ಯಾ ಪ್ರಮಾಣ ನಮ್ಮಲ್ಲಿ ಇರುತ್ತದೆ.

ಸದ್ಯದ ನಮ್ಮ ಸ್ಥಿತಿ ನೋಡಿದರೆ ಗೋದಿಕಾಳಿನಷ್ಟು

ವಿದ್ಯಾ ಇದ್ದರೆ ಪರ್ವತದಷ್ಟು ಅವಿದ್ಯಾ ಇರುತ್ತದೆ.

ಶಾರದೆಯ ಕೃಪೆ ಜ್ಞಾನಶಕ್ತಿಯ ಕೃಪೆ ಆಗಿರುತ್ತದೆ.

ಇದು ವಾಣಿರೂಪದಲ್ಲಿ ನಮ್ಮಲ್ಲಿ ಪ್ರಕಟ

ಆಗುತ್ತದೆ.ಸದ್ಗುರುಗಳು ಕೊಡುವ ನಾಮವು ಇದೇ

ಆಗಿರುತ್ತದೆ.ಪರಾವಾಣಿಯಲ್ಲಿ ಇರುವ ನಾಮವನ್ನು

ನಮಗೆ ಸದ್ಗುರುಗಳು ಕೊಡುತ್ತಾರೆ.ಸದ್ಗುರುಗಳು ಕೊಟ್ಟ

ನಾಮವನ್ನು ಹಿಡಿದುಕೊಂಡು ನಾವು ನಮ್ಮ ಮನಸ್ಸನ್ನು

ಪರಾವಾಣಿಯವರೆಗೆ ಒಯ್ಯಬೇಕು.ಯಾವಾಗ ಸಂಪೂರ್ಣ ಚಿತ್ತಶುದ್ಧಿ ಆಗುವುದೊ ಆಗ ಇದು ಸಂಭವಿಸುವದು.ನಾಮಸ್ಮರಣೆಯ ಮೂಲಕ

ವಾಸನಾ ತ್ಯಾಗ ಹೇಗೆ ?...!!!

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Friday, January 6, 2023

ಮೋಕ್ಷ ಪ್ರಾಪ್ತಿಯ ಗುಟ್ಟು

  ಶ್ರೀ ರಾಮ ಸಮರ್ಥ 

                              ಸದ್ಗುರು ಶ್ರೀ  ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು
                                              ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಕೀ ಜೈ 
  ಪರಮ ಪ್ರಾಪ್ತಿ, ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು . ಅಹೇತುಕ  ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥ ರಾಗಬೇಕು . ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ ರಾಮನಾಮ ಸ್ಮರಣ ದ ಹೊರತು  ಎರಡನೇ ಉಪಾಯವಾವುದೂ ಇಲ್ಲ .
ಆಯುಷ್ಯದ್ದು ಭರವಸೆ ಇಲ್ಲ . ಆದಷ್ಟು ತೀವ್ರವಾಗಿ ಕೃ ತಾರ್ಥ ರಾಗಲಿಕ್ಕೆ  ಪ್ರಯತ್ನ ಮಾಡಬೇಕು . ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ  ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು  ಸಾಧು ಸಂಗತಿಯಿಂದ ಕ್ಷಮಾ , ಭೂತದಯಾ , ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವೃತ್ತಿ ಮಾರ್ಗದ ತ್ಯಾಗ, ನಿವೃತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗ ಗಳು ಪ್ರಯತ್ನ ಮಾಡದೆ ಲೇ ದೊರೆಯುತ್ತವೆ  ಕಾಮ-ಕ್ರೋಧಾದಿ ಷದ್ವೈ ರಿಗಳೂ , ಪಾರಮಾರ್ಥಕ್ಕೆ ವಿಘ್ನ ಮಾಡತಕ್ಕಂಥ ದಂಭ ಅಹಂಕಾ ರಾದಿ ಗಳೂ  ತಮ್ಮಷ್ಟಕ್ಕೆ ತಾವೇ ಲಯ ಹೊಂದುತ್ತವೆ ಸಾಧು ಸಂಗತಿ ಮಹಿಮಾ ಅಗಾಧವದೆ  ಸಾಧುಗಳಲ್ಲಿ ಸದೋದಿತ ಭಗವತ್ಚರ್ಚ , ಭಗವದ್ಗುಣಾನುವರ್ಣನ , ರಾಮನಾಮಸ್ಮರಣ , ಸದೋಪದೇಶ ಅಹೋ ರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲಾ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತ ನಾಗುತ್ತಾನೆ

ವಿಷಯಾಕಾರ ವೃತ್ತಿ ಯಿಂದ ಬಂಧಾ, ಪರಮಾತ್ಮಾಕಾರ ವೃತ್ತಿ ಯಿಂದ ಮೋಕ್ಷಾ . ವೃತ್ತಿಗೆ ವಿಷಯದ ಸಂಭಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ.  ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದ ಕಡೆ ಹೋಗಲಿಕ್ಕೆ ವೃತ್ತಿಗೆ ಸವಡ  ಕೊಡಬಾರದು.

"ಹೇ ರಾಮಾ, ಹೇ ದಯಾನಿಧೇ ! ನನ್ನ ಎಂದು  ಉಧ್ಧಾರ ಮಾಡುವೆ? ನಿನ್ನ ಸಗುಣ ಮೂರ್ತಿ ಎಂದು ಕಂಡೇನು? ರಾಮಾ, ನಾನು ಅಗಾಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ.  ಹೇ ದಯಾ ಸಮುದ್ರಾ , ರಾಮಾ , ತೀವ್ರವಾಗಿ ಭವ ಸಮುದ್ರವನ್ನು ದಾಟಿಸು.. ಸಂತತಿ, ಸಂಪತ್ತು ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ . ನಿನ್ನ ದೃಢ ಭಕ್ತಿ ಕೊಡು .ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ . ಕಿವಿಗಳು ರಾಮಾ , (ನಿನ್ನ) ಕಥಾ ಕೇಳಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸಂಮಾರ್ಜನಾದಿ  ಸೇವಾ  ಘಡಾಯಿಸಲಿ , ಪಾದಗಳಿಂದ ಪ್ರದಕ್ಷಿಣಾ ಘಡಾಯಿಸಲಿ. . ರಾಮಾ!  ನಾನು ಅಜ್ಞಾನಿ  ಇದ್ದೇನೆ.  ಏನೋ ತಿಳುವಳಿಕೆಯಿಲ್ಲ .ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. . ಶ್ರೀರಾಮಾ , ನಿನ್ನ ಹೊರತು ನನಗೆ ಯಾರೂ ಆಧಾರ ಇಲ್ಲ . ನೀನೆ ತಂದೆ, ತಾಯಿ, ಬಂಧು, ಬಳಗಾ, . ಹೇ ಕೃಪಾಸಾಗರಾ!  ಶ್ರೀ ರಾಮಾ! ಅಜ್ಞಾನಾಧ್ವಾಂತ  ನಿವಾರಣಾ , ನೀನೇ ಗತಿ ಎಂದು ಅನನ್ಯಭಾವದಿಂದ  ಶರಣು  ಹೋಗಬೇಕು.  ಸಹಸಾ  ಪಾಪಮಾರ್ಗದ ಕಡೆ ಪ್ರವೃತ್ತಿ ಇರಬಾರದು . ಸುಳ್ಳು ಕೆಲಸಕ್ಕೆ ಹೋಗಬಾರದು . ಜನರು ನಿಂದಾ -ಮಾಡಿದರೆ  ವಿಷಾದ ಪಡಬಾರದು . ಸ್ತುತಿ ಮಾಡಿದರೆ ಹರ್ಷ ಪಡಬಾರದು . ಜನರ ನಿಂದಾ-ಸ್ತುತಿ  ಮಾಡಬಾರದು . ಸರ್ವತ್ರದಲ್ಲಿ ಪರಮಾತ್ಮ ಇದ್ದಾನೆ..  ಹೆಂಡರು ಮಕ್ಕಳು, ಮನೆ, ಹೊಲಾ. ಸಂಪತ್ತು ಮೊದಲಾದ ದೃಶ್ಯ ಪದಾರ್ಥ ಮಿಥ್ಯಾ ಎಂದು ತಿಳಿಯಬೇಕು . ದೇವರು ಒಬ್ಬನೇ ಶಾಶ್ವತ. . ಅಹೋ ರಾತ್ರಿ ರಾಮಭಜನೆಯಲ್ಲೇ ಕಾಲ ಕ್ರಮಣ ಮಾಡಬೇಕು.
                                               ಜಯ ಜಯ ರಘುವೀರ ಸಮರ್ಥ

ಆನಂದ & ಸಮಾಧಾನ

 Study Circle- ಚಿಂತನಾ ಸರಣಿ -20 ದಿ.03-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಇಲ್ಲಿ ನಾವು ಈಗ ಆನಂದ, ಸಮಾಧಾನ ಇವುಗಳ

ಬಗೆಗೆ ನಮ್ಮ ಭಾರತೀಯ ಋಷಿಮುನಿಗಳು ತಮ್ಮ

ದೀರ್ಘಕಾಲೀನ ಚಿಂತನೆಯ ಮೂಲಕ ,ಈ ಆನಂದಕ್ಕೂ ಮೆಟ್ಟೆಲುಗಳು ಅಥವಾ ಆನಂದದ ಪ್ರಮಾಣ ಹೇಗೆ ಹೆಚ್ಚು ಹಚ್ಚು ಇರುತ್ತದೆ ಎಂಬುದರ 

ಬಗೆಗೆ ತೈತ್ತರೀಯ ಉಪನಿಷತ್ ನಲ್ಲಿ ಹೇಳಿರುತ್ತಾರೆ.

ಈಗ ನಮಗೆ ಭಗವಂತನ ಪರಿಚಯವೇ ಸರಿಯಾಗಿ

ಇಲ್ಲದ ಮೇಲೆ ಅವನ ಆನಂದದ ಸ್ವರೂಪದ ಬಗೆಗೆ

ಕಲ್ಪನೆಯಾದರೂ ಹೇಗೆ ಬರುತ್ತದೆ.ಅಂದರೆ 

ನಿರುಪಾಧಿಕ ಆನಂದದ ಕಲ್ಪನೆ ಬರುವುದು ಸ್ವಲ್ಪ

ಕಷ್ಟ ಸಾಧ್ಯ ಇರುತ್ತದೆ.ಈಗ ಈ ಆನಂದದ ಮೆಟ್ಟಿಲು

ಹೇಗೆ ಹೇಳಿರುತ್ತಾರೆ ನೋಡೋಣ.ಈಗ ಸದ್ಯ ನಮಗೆ

ಇರುವುದು ಸ್ಥೂಲ ಮರ್ತ್ಯಲೋಕದ ಶರೀರ.ಇದರಿಂದ

ಅನುಭವಿಸುವ, ಅಂದರೆ ಒಬ್ಬ ಚಕ್ರವರ್ತಿ ವೈಭವ

ಐಶಾರಾಮಿ, ಯವ್ವನದಿಂದ ಇರುವಂತಹ ವ್ಯಕ್ತಿ

ಪಡುವ ಆನಂದವನ್ನು ಒಂದು ಪ್ರಮಾಣ ಎಂದರೆ,ಅಂದರೆ ಈ ಭೂಲೋಕದಲ್ಲಿ ವಸ್ತು ವ್ಯಕ್ತಿ ಮತ್ತು ಪರಿಸ್ಥಿತಿಗಳಿಂದ ಪಡೆಯಬಹುದಾದ ಹೆಚ್ಚಿನ

ಆನಂದ ಇದು ಆನಂದದ ಮೊದಲ ಪ್ರಮಾಣ ಅಥವಾ

ಮೆಟ್ಟಿಲು ಆದರೆ, ನಂತರ,ಇಂತಹ ಆನಂದದ ನೂರು

ಪಟ್ಟು ಹೆಚ್ಚಿಗೆ ಆದರೆ ಅದು ಒಂದು ಮನುಷ್ಯ ಗಂಧರ್ವರ ಒಂದು ಆನಂದ ,ಇಂತಹ ನೂರು ಗಂಧರ್ವರ ಆನಂದವೆಂದರೆ ಒಂದು ದೇವಗಂಧರ್ವ

ಆನಂದ, ಹೀಗೆ ನೂರು ದೇವ ಗಂಧರ್ವರ ಆನಂದ

ಎಂದರೆ ಒಂದು ಪಿತೃ ಲೋಕದ ಆನಂದ, ಇಂತಹ

ನೂರು ಪಿತೃಆನಂದ ಎಂದರೆ ಒಂದು ಸ್ವಯಂ ಸಿದ್ಧ

ದೇವ ಆನಂದ,ಇಂತಹ ನೂರು ಸ್ವಯಂ ಸಿದ್ಧರ ಆನಂದ

ಎಂದರೆ ,ಒಂದು ಕರ್ಮಸಿದ್ಧ ದೇವ ಆನಂದ, ಇಂತಹ

ನೂರು ಕರ್ಮಸಿದ್ಧ ಆನಂದ ಎಂದರೆ ಅವರು ಕರ್ಮದ

ಸಹಾಯದಿಂದ ದೇವತ್ವ ಪಡೆದಿರುತ್ತಾರೆ, ಇಂತಹ ಕರ್ಮ

ದೇವರ ನೂರು ಆನಂದ ಅಂದರೆ ,ದೇವರ ಒಂದು 

ಆನಂದ ಆಗುತ್ತದೆ, ಅಂದರೆ ಇಂದ್ರ ಲೋಕದ ದೇವತೆ,

ಇಂತಹ ದೇವರ ನೂರು ಆನಂದ ಸೇರಿ ಇಂದ್ರನ

ಒಂದು ಆನಂದವಾಗುತ್ತದೆ.ಈ ಇಂದ್ರನ ನೂರು ಆನಂದವು ,ಬ್ರಹಸ್ಪತಿ ಅಂದರೆ ದೇವತೆಗಳ ಗುರುವಿನ

ಒಂದು ಆನಂದವಾಗುತ್ತದೆ.ಇಂಥ ಬ್ರಹಸ್ಪತಿಯ

ನೂರು ಆನಂದಗಳು ಸೇರಿ ಒಂದು ಪ್ರಜಾಪತಿಯ

ಆನಂದವಾಗುತ್ತದೆ.ಇಂಥ ಪ್ರಜಾಪತಿಯ ನೂರು

ಆನಂದ ಸೇರಿದರೆ ಒಂದು ಬ್ರಹ್ಮನ ಆನಂದ

ಆಗುತ್ತದೆ, ಇನ್ನು ಮುಂದಿನ ಆನಂದ ಅಳತೆಗೆ ಸಿಗುವದಿಲ್ಲ.ಅಂದರೆ ಮಹೇಶ, ವಿಷ್ಣು ಇವರ ಆನಂದ

ಅನಂತ ಅಪಾರ.

*" ಇಂಥ ಈ ಆನಂದವು ಯಾರು ನಿಷ್ಕಾಮ ಹಾಗೂ 

ಆತ್ಮಜ್ಞಾನಿಗೆ ಸಿಗುತ್ತದೆ ತಾತ್ಪರ್ಯವೆಂದರೆ,.ಈ ಎಲ್ಲ ತರಹದ ಆನಂದಗಳು ಯಾರು ಭಗವಂತನ ಸಾಕ್ಷಾತ್ಕಾರದ ಪರಮೋಚ್ಚ

ಅನುಭವ ,ಆಧ್ಯಾತ್ಮ ಲೋಕದ ಚಕ್ರವರ್ತಿ ಸಮಾನ

ಇರುತ್ತಾರೋ ಅವರು ಅನುಭವಿಸುತ್ತಾರೆ"*

ಈಗ ಕಲ್ಪನೆ ಮಾಡಿರಿ ನಾವು ಮನುಷ್ಯ ಭಾವದಲ್ಲಿ

ಅಥವಾ ಸ್ವರ್ಗದಲ್ಲಿ ಅನುಭವಿಸುವ ಆನಂದಗಳು

ಎಷ್ಟು ಕ್ಷುಲ್ಲಕವಾದದ್ದವು, ಪುಣ್ಯ ಕ್ಷೀಣವಾದರೆ 

ಮತ್ತೆ ಏನಾಗಿ ಹುಟ್ಟುವೆವೊ ಗೊತ್ತಿಲ್ಲ.ಇದು 

ಒಂದು ಆದರೆ.ಇನ್ನೊಂದು *"ಕೇವಲ ಕೇವಲ 

ಮನುಷ್ಯರಾಗಿ ಹುಟ್ಟಿ ಸಾಧನೆ ಮಾಡಿ ಈ ಪರಮೋಚ್ಚ

ಅವಸ್ಥೆಯನ್ನು ಪಡೆಯಲು ಸಾಧ್ಯ.

ಉನ್ನತ ಲೋಕಗಳಲ್ಲಿ ಸುಖ ಹೊಂದುತ್ತಿರು ಯಾವದೇ

ಲೋಕದವರು ಈ ಪರಮೋಚ್ಚ ಆನಂದವನ್ನು 

ಪಡೆಯಬೇಕು ಎಂದರೆ *" ಮಾನವರಾಗಿಯೇ

ಹುಟ್ಟಿ ಬರಬೇಕು*"ಬೇರೆ ಯಾವದೇ ವಿಧದಿಂದಲೂ

ಶಕ್ಯವಿಲ್ಲ ಎಂದು ಹೇಳುತ್ತಾರೆ.ಆದ್ದರಿಂದಲೇ

ದಾಸರು ಹೀಗೆ *"ಮಾನವ ಜನ್ಮ ದೊಡ್ಡದು ,ಇದ

ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ"*ಎಂದು

ಹಾಡಿರುತ್ತಾರೆ, ಸಮರ್ಥರು *"ನರದೇಹ ಸ್ತವನ"*ಎನ್ನುವ ಸಮಾಸ ದಾಸಬೋಧದಲ್ಲಿ 

ಬರೆದಿರುತ್ತಾರೆ,ಈಗಲಾದರೂ ನಮಗೆ ಮನುಷ್ಯ

ಜನ್ಮದ ಸಾರ್ಥಕತೆ ಮಾಡಿಕೊಳ್ಳುವ ಸರಳ ಸಾಧನೆ

ಆದ ನಾಮಸ್ಮರಣೆ ಮಾಡುವ ಶಾರದೆಯ ಕೃಪೆ ಆಗಲಿ

ಸದ್ಗುರುಗಳ ಕೃಪೆ ಆಗಲಿ......!...ಆನಂದವು

ದೇಹದಲ್ಲಿ ಅನುಭವಿಸಬೇಕಾಗಿರುತ್ತದೇನೊ ನಿಜ,

ಆದರೆ ಅದು ದೇಹದ ಮೂಲಕ ಅನುಭವಿಸುವದಲ್ಲ

ಇದನ್ನು ಕುರಿತು ಚಿಂತನೆ ಮಾಡೋಣ...!...

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ಭಗವಂತನ ದರ್ಶನ ಅಥವಾ ಆತ್ಮಜ್ಞಾನಿಯ ಆನಂದ ಇದರ ಕಿಮ್ಮತ್ತು

 Study Circle- ಚಿಂತನಾ ಸರಣಿ -21 ದಿ.03-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಭಗವಂತನ ದರ್ಶನ ಅಥವಾ ಆತ್ಮಜ್ಞಾನಿಯ ಆನಂದ

ಎಷ್ಟು ಉಚ್ಚ ಮಟ್ಟದ್ದು ಇರುತ್ತದೆ ಎನ್ನುವುದನ್ನು

20 ರ ಚಿಂತನಾ ಸರಣಿಯಲ್ಲಿ ಚಿಂತನೆ ಆಯಿತು.ಇನ್ನು

ಇದರ ಕಿಮ್ಮತ್ತು ಅಂದರೆ ಮೌಲ್ಯ ಎಷ್ಟು ಉನ್ನತ

ಮಟ್ಟದ್ದು ಇರಬಹುದು.ಇದನ್ನು ಕಠೋಪನಿಷತ್ತಿನ 

ನಚಿಕೇತನ ಪ್ರಸಂಗದಲ್ಲಿ ಹೇಳಲಾಗಿದೆ.ನಚಿಕೇತನ ತಂದೆಯಾದ ವಾಜಶ್ರವಸ ನು ,ಕೋಪದ ಭರದಲ್ಲಿ

ನಿನ್ನನ್ನು ಯಮನಿಗೆ ದಾನ ಕೊಟ್ಟಿದ್ದೇನೆ ಹೋಗು ಎಂದನು.ಅವನು ಯಮಲೋಕಕ್ಕೆ ಹೋದಾಗ ಅವನ

ಮನೆ ಬಾಗಿಲಲ್ಲಿ ಕೂಡಬೇಕಾಯಿತು.ಯಮ ಬಂದು

ನೋಡಿದಾಗ ಇವನನ್ನು ನೋಡಿ ಇವನಿಗೆ ಮೂರು ವರ

ಕೇಳಲು ಹೇಳಿದನು.ಮೊದಲನೆಯ ವರದಲ್ಲಿ ತಂದೆಯು

ಕ್ರೋಧರಹಿತನಾಗಲಿ, ಪ್ರೀತಿಯುಳ್ಳವನಾಗಲಿ ಎಂದು,

ಎರಡನೆಯ ವರವಾಗಿ ಯಾವ ರೀತಿಯ ಯಜ್ಞ 

ಮಾಡುವದರಿಂದ ಮನುಷ್ಯನು ಸ್ವರ್ಗಪ್ರಾಪ್ತಿ 

ಮಾಡಿಕೊಳ್ಳಬಹುದು ಎಂದು ,ಮೂರನೆಯದಾಗಿ

ಮೃತ್ಯುವಿನ ರಹಸ್ಯ, ಆತ್ಮಜ್ಞಾನ ಕುರಿತು ಕೇಳಿದನು.

ಯಮನು ಆದರ ಪ್ರೀತಿಗಳಿಂದ ಇದನ್ನು ಕೇಳಬೇಡ 

ಎಂದನು.ಅದಕ್ಕೆ ನಚಿಕೇತ ಒಪ್ಪಲಿಲ್ಲ.ಅದಕ್ಕೆ ಯಮನು

ನೂರಾರು ವರ್ಷಗಳ ಅಥವಾ ಬೇಕೆನಿಸಿದಷ್ಟು ವರ್ಷ,

ಆಯುಸ್ಸು, ಮೃತ್ಯುಲೋಕದ ಸಕಲ ಐಶ್ವರ್ಯ ಭೋಗ

,ಚಕ್ರವರ್ತಿ ಪಟ್ಟ ಏನೆನೊ ಬೇಕೊ ಕೇಳು ಕೊಡುತ್ತೇನೆ,

ಆದರೆ ಆತ್ಮಜ್ಞಾನ ಕೇಳಬೇಡ ಎಂದನು.ಅಂದರೆ

ಆತ್ಮಜ್ಞಾನದ ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ.ಕೊನೆಗೆ ನಚಿಕೇತನು ಎಷ್ಟೇ ಭೋಗ ಭೋಗಿಸಿದರೊ ಒಂದಲ್ಲ

ಒಂದು ದಿನ ಕ್ಷೀಣವಾಗಿ ಮುಗಿಯುವ ಯಾವ ಭೋಗಗಳೂ ಬೇಡ, ಎಷ್ಟೇ ಆಯುಷ್ಯ ಇದ್ದರೂ

ಅದೂ ಮುಗಿಯುವದೇ, ಹಣ ಸುವರ್ಣ ಎಷ್ಟಿದ್ದರೂ ತೃಪ್ತಿ ಅನ್ನುವುದು ಆಗುವದು ಶಕ್ಯವೇ ಇಲ್ಲ ಎಂದು

ಅತ್ಯಂತ ಧೃಢ ಭಾವದಿಂದ ಕೊಡುವುದಾದರೆ

ಕೇವಲ ಆತ್ಮಜ್ಞಾನ ಕೊಡು ಎಂದಾಗ ಯಮನು

ಇವನ ವೈರಾಗ್ಯದಿಂದ ತೃಪ್ತನಾಗಿ ಅವನಿಗೆ 

ಅದರ ರಹಸ್ಯ ಹೇಳುತ್ತಾನೆ.ಅಂದರೆ ದೇಹಕ್ಕೆ ಎಷ್ಟೇ

ಉಪಚಾರ ಆದರ ಮಾಡಿದರೂ ಅದೇನೂ ಸಾರ್ಥಕ

ಆಗಲಾರದು,ಧಾರಣೆಗೆ ಎಷ್ಟು ಬೇಕೊ ಅಷ್ಟೆ ಅದಕ್ಕೆ

ಕೊಡಬೇಕು ಎನ್ನುವ ಸತ್ಯ ಅವನಿಗೆ ತಿಳಿದಿತ್ತು.

ಇದರಿಂದ ನಮಗೆ ಆತ್ಮಜ್ಞಾನದ ಮೌಲ್ಯ ಹಾಗೂ ಅದರ

ಪ್ರಮಾಣ ಎರಡರ ಬಗೆಗೆ ಚಿಂತನೆ ಆಯಿತು.

ಆನಂದವೆಂದರೆ ಪೂರ್ಣ ಸಮಾಧಾನ, ಸಮಾಧಾನ

ಎಂದರೆ ಆತ್ಮಶಾಂತಿ ಅಥವಾ ಆತ್ಮತೃಪ್ತಿ .

ಆನಂದವೆಂದರೆ ದೇಹಸುಖ ಅಲ್ಲ.ಅಥವಾ ದೇಹದ

ಸ್ವಸ್ಥತೆ ಅಲ್ಲ.ಇಲ್ಲಿ ಗಮನಕ್ಕೆ ಬರುವದು ಏನೆಂದರೆ,

ಇಂದ್ರಿಯಗಳಿಗೆ ಕಾಣುವ ಹಾಗೂ ದೇಹದಿಂದ

ಅನುಭವಿಸಲು ಬರುವ ದೃಶ್ಯವಸ್ತುಗಳಿಂದ ಇಂಥ

ಆನಂದ ಆಗಲು ಶಕ್ಯವೇ ಇಲ್ಲ.ಆನಂದವು ದೇಹದಲ್ಲಿ

ಅನುಭವಿಸವದಾಗಿರುತ್ತದೇನೊ ನಿಜ ಆದರೆ ಅದು

ದೇಹದ ಮೂಲಕ ಅಲ್ಲ.ಈ ಆನಂದವನ್ನು ಅನ್ನಮಯ,

ಪ್ರಾಣಮಯ,ಮನೋಮಯ ಹಾಗೂ ವಿಜ್ಞಾನಮಯ

ಕೋಶಗಳನ್ನು ದಾಟಿ ಅನುಭವಿಸುವದಿರುತ್ತದೆ.

ಅಂದರೆ ದೇಹದ ಪರಿಸ್ಥಿತಿ ಅತ್ಯಂತ ಪ್ರತಿಕೂಲ ಇದ್ದರೂ

ಜಗತ್ತಿನ ದೃಷ್ಟಿಯಿಂದ ಸುಖವಿಲ್ಲದಿದ್ದರೂ, 

ಪರಮಾರ್ಥ ಸಾಧನೆಯಿಂದ ಮೇಲೆ ಹೇಳಿದ ನಾಲ್ಕೂ

ಕೋಶಗಳನ್ನು ದಾಟಿ ಮನುಷ್ಯನು ಆನಂದದ

ಅನುಭವ ಅಂದರೆ ,ಆತ್ಮಜ್ಞಾನ ,ಅಥವಾ ಭಗವಂತನ

ದರ್ಶನದ ಅನುಭವ ಪಡೆಯಬಲ್ಲನು.ಅಂದರೆ 

ಪ್ರಾಪ್ತ ಪರಿಸ್ಥಿತಿಯಲ್ಲಿ ಸಮಾಧಾನ ಹೊಂದಿ ಅದರ

ಅಖಂಡತೆ ಸಂಪಾದಿಸುವ ಮನಸ್ಸಿನ ತಯಾರಿ ಮಾಡುವುದೆ ಸಾಧನೆ ಆಗಿರುತ್ತದೆ.ಈಗ 

ಮನುಷ್ಯನ ಅವಸ್ಥೆಗಳನ್ನು ಕುರಿತು ಚಿಂತನೆ 

ಮಾಡೋಣ.ಸಾಮಾನ್ಯವಾಗಿ ನಮಗೆ ನಿತ್ಯ ಮೂರು

ಅವಸ್ಥೆಗಳ ಅನುಭವ ಇರುತ್ತದೆ.ಅವು, ಜಾಗ್ರತ್, ಸ್ವಪ್ನ

ಹಾಗೂ ಸುಷುಪ್ತಿ (ಗಾಢ ನಿದ್ರಾವಸ್ದೆ).....!..

ಅವಧೂತ ತನಯ 

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

ಕರ್ಮ ಮತ್ತು ಕರ್ಮಫಲ ಇವುಗಳ ನಿಷ್ಠಾ

 Study Circle- ಚಿಂತನಾ ಸರಣಿ -22 ದಿ.05-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಕರ್ಮ ಮತ್ತು ಕರ್ಮಫಲ ಇವುಗಳ ನಿಷ್ಠಾ ಕಡಿಮೆ

ಆಗದ ಹೊರತು ಪರಮಾರ್ಥ ಆಗೋದಿಲ್ಲ.ಅಂದರೆ

ನಾನು ಕಷ್ಟಪಟ್ಟು ದುಡಿಯೋದರಿಂದ ನನಗ ಇಷ್ಟು

ಅಥವಾ ಇಂಥದ್ದು ಸಿಗಲೇಬೇಕು.ಅನ್ನೋ ನಮ್ಮ ಧೃಢ

ಭಾವನಾ ಏನು ಇದೆ ,ಇದೇ ನಮಗೆ ಈ ಪ್ರಪಂಚದಲ್ಲಿ

ದುಃಖಕ್ಕೆ ಕಾರಣ ಆಗುತ್ತದೆ.ನಮ್ಮ ಈ ನಿಷ್ಠಾ ದಿಂದ ನಾವು ಭಗವಂತನ ಕಡೆಯಿಂದ ಈ ಪ್ರಪಂಚದ ವ್ಯವಸ್ಥೆಯನ್ನೇ ನಮ್ಮ ಕೈಯಲ್ಲಿ ತೆಗೆದುಕೊಂಡ ಹಾಗೆ ಆಗುತ್ತದೆ.ಆದರೆ ಈ ಜಗತ್ತಿನ ವ್ಯವಸ್ಥೆಯಲ್ಲಿ ನಮ್ಮದು ಏನೂ ನಡೆಯುವದಿಲ್ಲ.ಇದು ನಮಗೆ ಅನಿಸುವದಿಲ್ಲ.

ಪರಿಣಾಮ,ಕ್ರೋಧ ,ಲೋಭ ,ಮೋಹ ಎಲ್ಲಾ

ತರಹದ ದುಃಖಗಳು ನಮ್ಮ ಪಾಲಿಗೆ ಬರುತ್ತವೆ.

ಕೆಲವೊಮ್ಮೆ ಎಷ್ಟು ಪರಿಣಾಮ ಆಗುತ್ತದೆ ಅಂದರೆ

ಭಗವಂತನ ಮೇಲೆಯೇ ಕೋಪ ಮಾಡುತ್ತೇವೆ,

ಗುರುಗಳ ಮೇಲೆಯೇ ಕೋಪ ಮಾಡುತ್ತೇವೆ.

ಯಾವಾಗ ಚಿತ್ತದಿಂದ ಒಂದು ವಾಸನೆ ಮನಸ್ಸಿನಲ್ಲಿ

ಬಂತು ,ಅಂದ ಕೂಡಲೇ ಬುದ್ಧಿ ಮೊದಲಾದ ವ್ಯವಸ್ಥೆಗಳು ಮುಂದಿನ ಅಂದರೆ ಆ ವಸ್ತು ಪಡೆಯಲು

ಏನು ಕರ್ಮ ಮಾಡಬೇಕು ಎಂಬುದರ ಕಡೆಗೆ

ನಮ್ಮನ್ನು ತೊಡಗಿಸುತ್ತವೆ.ಅಂದರೆ ಯಾವಾಗ ಇಂಥ

ಒಂದು ವಸ್ತುವಿನಿಂದ ನನಗೆ ಸುಖ ಸಿಗುತ್ತದೆ, 

ಅನಿಸಿ ಅದನ್ನು ಪಡೆಯಬೇಕು ಎನ್ನುವ ಈ ಧೃಢ

ಭಾವನೆಯೇ ನಮ್ಮನ್ನು ಈ ಪ್ರಪಂಚದಲ್ಲಿ ಕರ್ಮ

ಚಕ್ರದಲ್ಲಿ ತೊಡಗಿಸಿಬಿಟ್ಟಿದೆ.ಒಂದರ ನಂತರ 

ಒಂದು ,ಹಾಗೆಯೇ ಈ ಚಕ್ರ ನಮ್ಮನ್ನು ತಿರುಗಿಸ

ತೊಡಗುತ್ತದೆ.ಜೀವನದಲ್ಲಿ ಧಡಪಡ ಶುರು ಆಗುತ್ತದೆ.

ಆ ವಸ್ತವಿಗಾಗಿ ಕಷ್ಟ ಪಡುತ್ತೇವೆ.ಅಂದರೆ ಇದು ನಮ್ಮನ್ನು ಆಕುಂಚಿತ ತನ, ಅಜ್ಞಾನ ಇದರಲ್ಲಿ ಮುಳುಗಿಸುತ್ತದೆ.ಆದ್ದರಿಂದ ನಮಗೆ ಇದೇ ಕಷ್ಟಪಡುವದನ್ನು ನಾಮಸ್ಮರಣೆಗೆ ತೊಡಗಿಸುವದಿಲ್ಲ.

ಅಂದರೆ ಕಷ್ಟಪಡುವುದೇ ಆದರೆ ನಾಮಸ್ಮರಣೆಗೆ

ಕಷ್ಟಪಟ್ಟರೆ ನಮಗೆ ನಿಜವಾದ ಸಮಾಧಾನ ಸಿಗುತ್ತದೆ

ಎಂಬ ತಿಳುವಳಿಕೆ ನಮಗೆ ಬರುವದಿಲ್ಲ.ನಾವು ಎಷ್ಟು

ಅಜ್ಞಾನಮಟ್ಟಿ ಅಥವಾ ಅಜ್ಞಾನಮಯ ಆಗಿರುತ್ತೇವೆ

ಅಂದರೆ ನಮಗೆ ಅದೇ ಸಹಜ ಸ್ವಭಾವ ಆಗಿಬಿಟ್ಟಿದೆ.

ಸಣ್ಣವರು ಜಪಮಾಲೆ ಹಿಡಿದರೆ ,ಅದನ್ನೇನು 

ಮಾಡುತ್ತಿರುವಿ, ಏನಾದರೂ ಓದು ಪರಿಕ್ಷೆ ಉತ್ತಮ

ಪಾಸುಮಾಡು ದೊಡ್ಡ ಪಗಾರದ ನೌಕರಿ ಬರುತ್ತದೆ.

ಆರಾಮ ಇರು.ನಾಳೆ ವಯಸ್ಸಾದ ಮೇಲೆ ಅದನ್ನೇ

ಮಾಡುವದು ಇದೆ ಎಂದು ಅತ್ಯಂತ ಸಹಜವಾಗಿ

ಹೇಳಿಬಿಡುತ್ತೇವೆ.ಸತ್ಪುರುಷರು ತಮ್ಮ ತಲೆ ಚಚ್ಚಿಕೊಳ್ಳಬೇಕು ಅಷ್ಟೇ.ಇಷ್ಟು ನಮ್ಮ ಅಜ್ಞಾನದ

ಸ್ವಭಾವ ಆಗಿಬಿಟ್ಟಿರುತ್ತದೆ.ಎಲ್ಲಿಯವರೆಗೆ ಅಂದರೆ

ಆವರಿಗೇನು ತಿಳಿಯುತ್ತದೆ ಗುರುಗಳಿಗೆ, ನಿನ್ನ

ಅಭ್ಯಾಸ ,ಶಿಕ್ಷಣ ನೋಡಿಕೊ ಎಂದು ನಾವು

ಮಕ್ಕಳಿಗೆ ಹೇಳುತ್ತೇವೆ.ನಾವು ನಾಮಸ್ಮರಣೆ ಮಾಡದೇ

ಇದ್ದರೇ ಗುರುಗಳೇನೂ ಜವಾಬ್ದಾರಿ ಅಲ್ಲ.

ಇದು ನಮ್ಮ ಇಂದಿನ ಅಜ್ಞಾನಮಯ ಜಾಗೃತಿ 

ಅವಸ್ಥೆ ಆಗಿರುತ್ತದೆ !!!.ಈ ದೃಷ್ಟಿಯಿಂದ ನಮ್ಮ ಸ್ವಪ್ನದ

ಅವಸ್ಥೆ, ಸುಷುಪ್ತಿ ಅವಸ್ಥೆ ಮಿಥ್ಯಾ ಅನಿಸುತ್ತವೆ.

ಇನ್ನು ಸ್ವಪ್ನದಲ್ಲಿ ,ಏನೇನೋ ಎಲ್ಲರೀತಿಯ, ರಾಗದ್ವೇಷ

ಮೋಹಗಳ ವ್ಯವಹಾರ ಮಾಡುತ್ತೇವೆ.ಆಗ ಜಾಗ್ರತ 

ಅವಸ್ಥೆಯ ಅರಿವು ಇರುವದಿಲ್ಲ.ಅಂದರೆ ಸ್ವಪ್ನದ

ಅವಸ್ಥೆಯ ದೃಷ್ಟಿಯಿಂದ ಜಾಗೃತ ಹಾಗೂ ಸುಷುಪ್ತಿ

ಎರಡು ಅವಸ್ಥೆಗಳು ಮಿಥ್ಯಾ ಅನಿಸುತ್ತವೆ.

ಇನ್ನು ಸುಷುಪ್ತಿ ಅವಸ್ಥೆ ಅಂದರೆ ಗಾಢ ಸ್ವಪ್ನರಹಿತ

ವಿಚಾರ ರಹಿತ ಅವಸ್ಥೆಯಲ್ಲಿ ಅಂದರೆ ಆನಂದದ

ಅವಸ್ಥೆಯಲ್ಲಿ ನಾವು ಇರುತ್ತೇವೆ.ಇದು ಎಷ್ಟು ಆನಂದ

ಅನಿಸುತ್ತದೆ ಅಂದರೆ, ಯಾರಾದರೂ ಸೇರುವಂಥ

ಸಿಹಿತಿನಿಸು ತಿನ್ನಲು ಎಬ್ಬಿಸಿದರೂ ಎಳಲು ಮನಸ್ಸು

ಆಗುವದಿಲ್ಲ, ಎಬ್ಬಿಸಿದವರಿಗೆ ಯಾಕಾದರೂ ಎಬ್ಬಿಸಿದಿರಿ

ಎಂಥ ಆನಂದದ ನಿದ್ರೆಯಲ್ಲಿ ಇದ್ದೆ ಎಂದು ಅನ್ನುತ್ತೇವೆ.

ಈ ಆನಂದವು ನಮಗೆ ಹೊರಗಿನ ಪರಿಸ್ಥಿತಿ ,ವಸ್ತು,

ವ್ಯಕ್ತಿ ,ಇವುಗಳ ಮೇಲೆ ಅವಲಂಬಿತ ಇರುವದಿಲ್ಲ.

ಇದೇ ಸುಷುಪ್ತಿಯ ವೈಶಿಷ್ಟ್ಯ ಆಗಿರುತ್ತದೆ.

ಈ ಸುಷುಪ್ತಿ ಅವಸ್ಥೆಯಲ್ಲಿನ ದೃಷ್ಟಿಯಿಂದ ,ಜಾಗೃತ

ಮತ್ತು ಸ್ವಪ್ನ ಅವಸ್ಥೆಗಳು ಮಿಥ್ಯಾ ಅನಿಸುತ್ತವೆ.

ಇದೆಲ್ಲ ನೋಡಿದರೆ ಯಾವದು ಸತ್ಯ ಯಾವದು ಮಿಥ್ಯೆ

ಎನ್ನುವದೇ ತಿಳಿಯುವದಿಲ್ಲ.ಇವು ಮೂರಕ್ಕೂ ಮೀರಿದ

ನಮಗೆ ಅಂದರೆ ಸಾಮಾನ್ಯರಿಗೆ ಅನುಭವವೇ ಇಲ್ಲದ

ಅವಸ್ಥೆ ಒಂದಿದೆ ...!!

ಅವಧೂತ ತನಯ 

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐॐ

ವಾಸನಾ ತ್ಯಾಗ - Sacrifice of desires

 Study Circle- ಚಿಂತನಾ ಸರಣಿ -24 ದಿ.06-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

"ವಾಸನಾ ತ್ಯಾಗ"ಚಿಂತನೆಗೂ ಮೊದಲು,ಆಧ್ಯಾತ್ಮಿಕ ದೃಷ್ಟಿಯಿಂದ ನಾವು ಅಥವಾ ಮನುಷ್ಯರು ಎಷ್ಟು ಅವಸ್ಥೆಗಳ ಮೂಲಕ ಜೀವನ ಮಾಡುತ್ತಿದ್ದೇವೆ ಇವುಗಳ ಕುರಿತು ಇನ್ನೊಮ್ಮೆ ಚಿಂತನೆ ಮಾಡೋಣ.

ಸಾಮಾನ್ಯವಾಗಿ ಜಾಗೃತ ,ಸ್ವಪ್ನ ಹಾಗೂ ಸುಷುಪ್ತಿ

ನಂತರ ಕೊನೆಯ ಹಾಗೂ ಉನ್ನತ ಅವಸ್ಥೆ ಅಂದರೆ

ತುರೀಯ ಅವಸ್ಥೆ.ಈ ಜಾಗೃತ ಅವಸ್ಥೆಯಲ್ಲೂ ಕೂಡಾ

ನಾವು ಮನುಷ್ಯರ ತರಹ ವರ್ತನೆ ಮಾಡುವುದು

ಅಂದರೆ ಉದಾರತನದಿಂದ ಜೀವನ ಮಾಡುವುದು

ಅಂದರೆ , ಇದರಲ್ಲೂ, ಪಾಶವೀಯ ಗುಣದಿಂದ,

ಮಾನವೀಯ ಗುಣಕ್ಕೆ ನಂತರ ದೈವೀ ಗುಣಕ್ಕೆ

ಜೀವನದಲ್ಲಿ ಪರಿವರ್ತನೆ ಆಗಬೇಕು.

ಎಂತೆಂತಹ ವಿದ್ಯಾವಂತರಿರುತ್ತೇವೆ, ಆದರೆ ನಡೆದುಕೊಳ್ಳುವದು ಮಾತ್ರ ಪಶುವಿನ ತರಹ ಇರುತ್ತದೆ.

ಇಲ್ಲಿ ಯಾರ ನಿಂದೆ ಅಥವಾ ಮನಸ್ಸು ನೋಯಿಸುವ

ವಿಚಾರ ನಮಗಿಲ್ಲ.ಆದರೆ ಗುಣಗಳ ಚಿಂತನೆಯ

ದೃಷ್ಟಿಯಲ್ಲಿ ಹೇಗೆ ಹೇಗೆ ಜೀವನ ಮಾಡುತ್ತ ಇರುತ್ತಾರೆ,

ಎಂದರೆ ,ನನ್ನ ವೈಯಕ್ತಿಕ ಅನುಭವ ಹೇಳುತ್ತೇನೆ,

ನಾನು ಅನಿವಾರ್ಯವಾಗಿ ನಮ್ಮ ಮನೆಯಿಂದ

ಕೆಳಗೆ ನೆರಳು ಇರುತ್ತದೆ ಮತ್ತು ಖಾಲಿ ಇರುತ್ತದೆ ಎಂದು

ಕಾರ ಪಾರ್ಕ ಮಾಡಿದಾಗ, ಅಲ್ಲಿನ ದೊಡ್ಡ ಕಂಪೌಂಡ

ಇರುವ ಉತ್ತಮ ವಿದ್ಯಾವಂತ ಸುಶಿಕ್ಷಿತ ಮನೆಯವರು

ದಿನಾಲೂ ಕಾರಿನ ಮೇಲೆ ಕಸ ಹಾಕಿಸುತ್ತಿದ್ದರು.

ಅಲ್ಲಿ ಯಾರೂ ವಾಹನ ನಿಲ್ಲಿಸಬಾರದು, ನಿಜವಾಗಿ

ಅವರಿಗೆ ಯಾವದೇ ರೀತಿಯ ತೊಂದರೆ ಇಲ್ಲದಿದ್ದರೂ

ತಮ್ಮ ಕಂಪೌಂಡ ಪಕ್ಕ ಅನ್ನುವ ಕಾರಣದಿಂದ ಹೀಗೆ

ಮಾಡುತ್ತಾರೆ ಎಂದು ಪರಿಚಯದವರೊಬ್ಬರು ನನಗೆ

ಹೇಳಿದರು.ಇದು ಎಂಥ ನಡವಳಿಕೆ ವಿಚಾರ ಮಾಡಿರಿ.

ಹೀಗೆ ಒಂದು ಅನುಭವ ಆದರೆ, ನನ್ನ ಕೆಲಸದ ನಿಮಿತ್ತ

ಮಿತ್ರರೊಬ್ಬರಿಗೆ ಕರೆ ಮಾಡಿದಾಗ ,ಅವರಿಗೆ ಯಾವದೇ

ರೀತಿಯ ಸಂಬಂಧ ಇಲ್ಲದಿದ್ದರೂ ಅವರು ಕರೆದು 

ಸಹಾಯ ಮಾಡಿದರು.ಇದು ಉದಾರತನದ 

ಮಾನವೀಯ ಭಾವ ಆಗಿರುತ್ತದೆ.ನಾನು ಧನ್ಯವಾದಗಳನ್ನು ಹೇಳಿದಾಗ ಅವರು ಯಾರಾದರೂ

ಸಹಾಯ ಕೇಳಿದಾಗ ,ಕೈಲಾದಷ್ಟು ಸಹಾಯ ಮಾಡುವದು ನನಗೆ ಸೇರುತ್ತದೆ ಎಂದು ಹೇಳಿದರು 

ಇದು ಮಾನವೀಯ ಭಾವನೆ ತೋರಿಸುತ್ತದೆ.

ಇನ್ನು ದೈವೀ ಗುಣದ ಅನುಭವ ಸತ್ಪುರುಷರ

ಜೊತೆ ಬರುವ ಅನುಭವ ಆಗಿರುತ್ತದೆ.ಔದಾರ್ಯತೆಯ

ಉನ್ನತ ಮಟ್ಟದ ಅನುಭವ ಅಲ್ಲಿ ಬರುತ್ತದೆ.

ತಮ್ಮದು ಏನೇ ಆಗಲೀ ಇನ್ನೊಬ್ಬರಿಗೆ ಒಳ್ಳೆಯದೆ

ಆಗಬೇಕು.ಇದು ದೈವೀ ಗುಣ ಆಗಿರುತ್ತದೆ.

ಈಗಾಗಲೇ ನಾವು ಜಾಗ್ರತ, ಗುಣದ ದೃಷ್ಟಿಯಿಂದ

ಸ್ವಪ್ನ ಹಾಗೂ ಸುಷುಪ್ತಿ ಮಿಥ್ಯಾ ಅನಿಸುತ್ತವೆ,

ಸುಷುಪ್ತಿಯಲ್ಲಿ ಇದ್ದಾಗ ಜಾಗ್ರತ ಹಾಗೂ ಸ್ವಪ್ನ

ಮಿಥ್ಯಾ ಅನಿಸುತ್ತವೆ ಇದರಂತೆ ಸ್ವಪ್ನಾವಸ್ಥೆಯಲ್ಲಿ

ಜಾಗ್ರತ ಹಾಗೂ ಸುಷುಪ್ತಿ ಮಿಥ್ಯಾ ಅನಿಸುತ್ತವೆ.ಇದು

ನಮ್ಮೆಲ್ಲರ ಅನುಭವ ಆಗಿರುತ್ತದೆ.ಈಗ ನಮ್ಮ

ಧ್ಯೇಯ ಭಗವಂತನ ದರ್ಶನವಾಗಿರುತ್ತದೆ.ಅಂದರೆ

ಅಖಂಡ ಸಮಾಧಾನ, ಅಖಂಡ ಆನಂದದ ಅನುಭವ

ಪಡೆಯುವದೇ ನಮ್ಮ ಗುರಿಯಾಗಿರುತ್ತದೆ.ಅಂದರೆ

ಸಮಾಧಾನದ ಅಭ್ಯಾಸ ಮಾಡುವದು ನಮ್ಮ ಸಾಧನೆ

ಆಗಿರುತ್ತದೆ.ಭಗವಂತನು ನಮ್ಮ ಅಂತರಂಗದ ಆಳದಲ್ಲಿ

ಇರುವದರಿಂದ ನಾವು ಹೊರಗಿನಿಂದ ಒಳಗೆ

ಅಂದರೆ ಹೊರಗೆ ಓಡುವ ಮನಸ್ಸನ್ನು ಹಿಡಿದು ,ಒಳಗೆ

ಎಳೆದು ಭಗವಂತನ ಕಡೆಗೆ ಹೋಗುವದು ಈ 

ಆಧ್ಯಾತ್ಮಿಕ ಸಾಧನೆ ಆಗಿರುತ್ತದೆ.ಅಂದರೆ ತುರೀಯ

ಅವಸ್ಥೆಯ ಅನುಭವ ಪಡೆಯುವದೇ ಈ ಎಲ್ಲ 

ಸಾಧನೆಗಳ ಗಮ್ಯ ಸ್ಥಾನವಾಗಿರುತ್ತದೆ.ಈ ತುರೀಯ

ಅವಸ್ಥೆಗೆ ಹೋಗುವಾಗ ನಾನಾ ರೀತಿಯ ಅನುಭವಗಳು ಬರುತ್ತವೆ.ಮೊದಲು ಇದ್ದ ಪರಿಸ್ಥಿತಿಯಲ್ಲಿ ಸಮಾಧಾನದಿಂದ ಇರುವ ಅಭ್ಯಾಸ

ಮಾಡಬೇಕು.ನಿಧಾನವಾಗಿ ಜಗತ್ತಿನ ಮೌಲ್ಯ, 

ಆಧ್ಯಾತ್ಮಿಕ ದೃಷ್ಟಿಯಿಂದ ಏನಿದೆ ಅದು ನಮ್ಮ ದೃಷ್ಟಿ

ಆಗಬೇಕು.ಇದು ಬಹಳ ಕಠಿಣ ಇರುತ್ತದೆ.

ನಾಮಸಾಧನೆಯಿಂದ ಯಾವಾಗ ದೇಹಮನಸ್ಸಿನ

ಗಂಟು ಯಾವುದನ್ನು ಚಿಜ್ಜಡ ಅನ್ನುತ್ತಾರೊ, ಅದು

ನಿಧಾನವಾಗಿ ಕಳಚತೊಡಗುತ್ತದೆ.ಆಗಲೆ ನಮಗೆ 

ಬೇರೆ ಬೇರೆ ತರಹದ ಅನುಭವಗಳು, ನಾನಾ

ರೀತಿಯ ದರ್ಶನಗಳು ಆಗುತ್ತವೆ.ಇದು ಎಲ್ಲರಿಗೂ

ಒಂದೇ ರೀತಿ ಆಗುವದಿಲ್ಲ.ಯಾವಾಗ ಸಂಪೂರ್ಣವಾಗಿ

ಚಿತ್ತಶುದ್ಧಿಯಾಗಿ, ನಮ್ಮ ಮನಸ್ಸು ಭಗವಂತನೊಂದಿಗೆ

ತಾದಾತ್ಮ್ಯ ಆಗುತ್ತದೆಯೊ ಆವಾಗ ಸಮಾಧಿ ಅವಸ್ಥೆಯ

ಅನುಭವ ಬರುತ್ತದೆ.ಈ ಅವಸ್ಥೆಯಲ್ಲಿ ನಮಗೆ ಈ

ಜಗತ್ತು ಇದ್ದರೂ ಅಷ್ಟೆ ಇಲ್ಲದಿದ್ದರೂ ಅಷ್ಟೆ ,ಅಂದರೆ

ಜಗನ್ಮಿಥ್ಯಾ ಎಂದು ಹೇಳುವದರ ಪ್ರತ್ಯಕ್ಷ ಅನುಭವ

ಬರುತ್ತದೆ.ಇದರ ಅಪ್ರತಿಮ ಉದಾಹರಣೆ ಶ್ರೀ

ಮಹಾರಾಜರು ಹೇಳಿರುತ್ತಾರೆ.ತಂದೆ ಮಗ ಕೂಡಿ ಸಕ್ಕರೆ

ಗೊಂಬೆ ತರಲು ಅಂಗಡಿಗೆ ಹೋದಾಗ, ತಂದೆ

ಹೇಗೆ ಕಿಲೊ ಎಂದು ಕೇಳಿದರೆ, ಮಗ ನನಗೆ ,ಆನೆ, ಒಂಟೆ

ಬೇರೆ ಬೇರೆ ಗೊಂಬೆಗಳ ಹೆಸರು ಹೇಳಿ ಅವೆಲ್ಲ ಬೇಕು

ಎಂದು ಹೇಳುತ್ತಾನೆ.ಇಲ್ಲಿ ಆ ಮಗನ ಮನೋ ಭೂಮಿಕೆ

ಏನು ಇದೆಯೋ ಅದು ನಮ್ಮ ಸದ್ಯದ ಭೂಮಿಕೆ

ಆಗಿದೆ.ಅಂದರೆ ಇಂತಹ ಮನೆ ಬೇಕು, ವಾಹನ ಬೇಕು,

ಅದು ಬೇಕು ,ಇದು ಬೇಕು ಎಂದು ನಾವು ಅಂದರೆ,

ಸತ್ಪುರುಷರು ಹೀಗೆಲ್ಲ ಬೇಕು ಎಂದು ಹೇಳವುದಿಲ್ಲ.

ಅವರಿಗೆ ಅದರ ಸರಿಯಾದ ಆಕಲನ ಇರುತ್ತದೆ.

ಈಗ ನಮಗೇಕೆ ಇದು ಸಾಧಿಸುವದಿಲ್ಲ ಅಂದರೆ,.ವಸ್ತು ಸ್ಥಿತಿ ಜಾಗ್ರತ ಅಂದರೆ ದೃಶ್ಯದ್ದು ಇದೆ, ಆದರೆ ಧ್ಯೇಯ

ಸ್ಥಿತಿ ಅದೃಶ್ಯ, ಅವ್ಯಕ್ತ, ಅಮೂರ್ತ ಸ್ಥಿತಿಯಲ್ಲಿ ಇದೆ.

ಈ ದೃಶ್ಯದಿಂದ ಅಮೂರ್ತ ಅವ್ಯಕ್ತದ ಕಡೆಗೆ

ಹೋಗುವದು ಎಂದರೆ ದೃಶ್ಯ ಜಗತ್ತಿನ ಮೌಲ್ಯ 

ಬದಲಾವಣೆ ಆಗುತ್ತ ಹೋಗುವದು.

ಸಮಾಧಾನದಿಂದ ಇದ್ದ ಪರಿಸ್ಥಿತಿಯಲ್ಲಿ ಇರುತ್ತ ಇರುತ್ತ

ಪರಿಸ್ಥಿತಿ ರಹಿತ ಸಮಾಧಾನ ಹೊಂದುಬೇಕು.ಇದು

ಅತ್ಯಂತ ಸೂಕ್ಷ್ಮ ಪ್ರಕ್ರಿಯೆ ಆಗಿರುತ್ತದೆ.ನಾಮದ ಅಭಿರುಚಿ, ನಾಮದಲ್ಲಿ ಮನಸ್ಸು ರಮಿಸುವಿಕೆಯ ಪ್ರಮಾಣ ಹೇಗೆ ಹೇಗೆ ಹೆಚ್ಚುತ್ತ ಹೋಗುವದೋ 

ಹಾಗೆ ಸಮಾಧಾನದ ಪ್ರಮಾಣ ಏರುತ್ತ ಹೋಗುವುದು.

ಇದನ್ನೇ ಹೇಗೆ ಸಾಧಿಸುವದು, ? ಇಲ್ಲಿಯೇ ವಾಸನಾ

ತ್ಯಾಗದ ಚಿಂತನೆ ಬೇಕಾಗುತ್ತದೆ!!.....

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Thursday, January 5, 2023

Turiya State - ತುರ್ಯಾವಸ್ಥೆ- Fourth state of consciousness

 Study Circle- ಚಿಂತನಾ ಸರಣಿ -23 ದಿ.06-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಮೂಕನಿಗೆ ಹೇಗೆ ಸಕ್ಕರೆಯ ಸವಿಯನ್ನು ಹೇಳಲು

ಹೇಳಿದರೆ , ಅಥವಾ ಚಿಕ್ಕ ಬಾಲಕನಿಗೆ ಯಾವರೀತಿ

ಪ್ರೌಢತನದ ಬಗೆಗೆ ಹೇಳಲು ಬರುವದಿಲ್ಲವೊ ಅದೇ

ರೀತಿ ತುರೀಯ ಅಥವಾ ತುರ್ಯಾವಸ್ಥೆಯ ಬಗೆಗೆ

ಹೇಳುವುದು ಕಠಿಣವಿರುತ್ತದೆ.ಹುಟ್ಟಿನಿಂದ ನಮ್ಮ

ಆಯುಷ್ಯದುದ್ದಕ್ಕೂ ಕೇವಲ ಜಾಗೃತ್ ,ಸ್ವಪ್ನ ಮತ್ತು

ಸುಷುಪ್ತಿಗಳಲ್ಲಿ ಇರುವ ನಮಗೆ ನಾಲ್ಕನೆಯ ಮತ್ತು

ಉನ್ನತ ಅವಸ್ಥೆಯಾದ ತುರ್ಯಾವಸ್ಥೆ ಅಥವಾ

ಸಮಾಧಿ ಅವಸ್ಥೆ ಇವುಗಳ ಬಗೆಗೆ ಚಿಂತನೆ ಮಾಡುವ

ಪ್ರಯತ್ನ ಮಾಡೋಣ.ಸದ್ಯಕ್ಕೆ ನಮಗೆ ತೀವ್ರ ಆನಂದ

ಉಂಟು ಮಾಡುವ ಅವಸ್ಥೆ( ಉಪಾಧಿ ರಹಿತ) ಆದದ್ದು

ಸುಷುಪ್ತಿ ಆಗಿರುತ್ತದೆ.ಇದಕ್ಕೂ ಮೇಲಿನ ತುರೀಯ

ಅವಸ್ಥೆಯಲ್ಲಿ ಜ್ಞಾನದ ಅನುಭವ ಇರುತ್ತದೆ.ಇದು

ಮಲಿನ ರಹಿತ ಮನಸ್ಸು ಹಾಗೂ ಬುದ್ಧಿಗೆ ಬರುವ ವಿಶಿಷ್ಟ ಅನುಭವ ಆಗಿರುತ್ತದೆ.ಅಂದರೆ ಜ್ಞಾನಚಕ್ಷು ಅಥವಾ ಅಂತರ್ಮನ ಎಚ್ಚರ ಇರುತ್ತದೆ.ಆದ್ದರಿಂದ

ಇದನ್ನು "ಜಾಗೃತ್ ಸುಷುಪ್ತಿ" ಎಂದೂ ಕರೆಯುತ್ತಾರೆ.

ಅಂದರೆ ಜಾಗೃತ ಇದ್ದಾಗ ಸುಷುಪ್ತಿಯ ಆನಂದ

ಅಂದರೆ ಉಪಾಧಿರಹಿತ ಆನಂದದ ಅನುಭವ 

ಇರುತ್ತದೆ.ಭಗವಂತನ ಮನಸ್ಸು ಅಥವಾ ವಿಶ್ವ ಮನಸ್ಸು

(ಕಾಸ್ಮಿಕ್ ಮೈಂಡ) ಇದರೊಂದಿಗೆ ತಾದಾತ್ಮ್ತತೆಯ ಅನುಭವ ಸಮಾಧಿ ಅಥವಾ ತುರ್ಯಾವಸ್ದೆ ಆಗಿರುತ್ತದೆ.ಭಗವಂತನ ಶಾರದಾ ಶಕ್ತಿಯ ಹಾಗೂ 

ಗುರುಕೃಪೆಯಿಂದ ಯೋಗಿಗಳು ಸಮಾಧಿ ಅವಸ್ದೆ

ಸಾಧಿಸುತ್ತಾರೆ.ಅದೇ ರೀತಿ ಸಾಧುಗಳು ಅಂದರೆ 

ಸಾಧಕರು ತುರ್ಯಾವಸ್ಥೆಯನ್ನು ಮುಟ್ಟುತ್ತಾರೆ.

ಇದಕ್ಕೆ ಸದ್ಗುರು ಕೃಪೆ ಹಾಗೂ ಪುಣ್ಯವಿಶೇಷ ಎರಡೂ

ಬೇಕಾಗುತ್ತವೆ.ಶ್ರೀ ಮಹಾರಾಜರ ಶಿಷ್ಯರೊಬ್ಬರಾದ

ಶ್ರೀ ಮಹಾಭಾಗವತರು ,ಸಮಾಧಿ ಅವಸ್ಥೆಯ ಅನುಭವ ಕೇಳಿದಾಗ ಶ್ರೀ ಮಹಾರಾಜರು ಕೃಪೆ ಮಾಡಿ

ಅವರಿಗೆ ಅದರ ಅನುಭವ ನೀಡುತ್ತಾರೆ.ಅವರು

ಸುಮಾರು ಅರ್ಧಗಂಟೆಗಳಾದ ಮೇಲೆ ಮತ್ತೆ ಸಾಮಾನ್ಯ

ಅವಸ್ಥೆಗೆ ಬಂದಾಗ ಶ್ರೀ ಮಹಾರಾಜರು ನಿಮ್ಮ

ಪುಣ್ಯಾಂಶ ಅಷ್ಟೇ ಇತ್ತು ಆದ್ದರಿಂದ ಹೀಗೆ ಆಯಿತು

ಎನ್ನುತ್ತಾರೆ.ಇನ್ನು ಇದನ್ನೂ ಮೀರಿ ಅಂದರೆ ತುರ್ಯಾತೀತ ಅವಸ್ಥೆಯಲ್ಲಿ ಕೆಲವು ಸತ್ಪುರುಷರು 

ಇರುತ್ತಾರೆ.ಉದಾಹರಣೆಗೆ ಶ್ರೀ ಮಹಾರಾಜರು, 

ಹೀಗೆ ಇರುತ್ತಿದ್ದರು.ಆದ್ದರಿಂದ ಅವರ ಬಗೆಗೆ

ಹೇಳುವಾಗ ತುರ್ಯಾತೀತ ಅವಸ್ಥಾ ಆಹೆ ನಿರಂತರ

ಎಂದು ಹೇಳುತ್ತಾರೆ.ಅಂದರೆ ಇಂತಹವರು

ಅಸಾಮಾನ್ಯ ಸತ್ಪುರುಷರಿರುತ್ತಾರೆ.ಇವರ ನಿತ್ಯ

ವ್ಯವಹಾರದಲ್ಲಿ ಎಲ್ಲವನ್ನೂ ಮಾಡುತ್ತಾರೆ, 

ಕೋಪಿಸುತ್ತಾರೆ,ಜಗಳವಾಡುತ್ತಾರೆ ,ಬಯ್ಯುತ್ತಾರೆ,

ನಮ್ಮಕ್ಕಿಂತಲೂ ವ್ಯವಹಾರಿಕ ಬುದ್ಧಿ ತೋರಿಸುತ್ತಾರೆ,

ಆದರೆ ಯಾವುದರಲ್ಲೂ ಅಂದರೆ ,

ಕೋಪ,ದ್ವೇಷ,ಮೋಹ ಲೋಭ ಇಂಥವುಗಳಲ್ಲಿ ಎಂದೂ

ಸಿಲುಕಿಕೊಳ್ಳುವದಿಲ್ಲ.ಶ್ರೀ ಮಹಾರಾಜರ ಚರಿತ್ರೆಯಲ್ಲಿ

ಇಂಥ ನಾನಾ ಪ್ರಸಂಗಗಳನ್ನು ನೋಡಬಹುದು.

ಒಬ್ಬರಿಗೆ ಬಯ್ಯುತ್ತಿದ್ದಾಗ, ಮತ್ತೊಬ್ಬರು ಭಗವದ್ಗೀತೆಯ ಶ್ಲೋಕವೊಂದರ ಮೂಲಕ ಸಿಟ್ಟಿನ ಬಗೆಗೆ ಕೇಳಿದಾಗ ತಡೆಯಿರಿ ಈ ಕೋಪವು ಕುತ್ತಿಗೆ 

ಮೇಲಿನದಾಗಿರುತ್ತದೆ ಎಂದು ಹೀಂದೆ ತಿರುಗಿ

ಶಾಂತವಾಗಿ ಹೇಳುತ್ತಾರೆ.ಇದು ಓದಲು ,ಕೇಳಲು

ಸಹಜವೆನಿಸುತ್ತದೆ .ಆದರೆ ಪ್ರತ್ಯಕ್ಷವಾಗಿ ನೋಡಿದಾಗ

ಹೀಗೆ ಮಾಡುವುದು ಎಷ್ಟು ಕಠಿಣ ಇರುತ್ತದೆ.

ನಾನೂ ಪ.ಪೂ.ಗುರುಗಳೊಂದಿಗೆ ಇಂಥ

ಕೆಲವು ಪ್ರಸಂಗ ನೋಡಿದ್ದೇನೆ.ಎಂತಹ ಕೋಪ

ಒದರಾಟ, ಅನಬಾರದ್ದನ್ನು ಅನಿಸಿಕೊಂಡು,

ಶಾಂತವಾಗಿ ಇದ್ದು ಎಲ್ಲ ಮುಗಿದ ಮೇಲೆ

ಅವರು ಇಡೀ ವಾತಾವರಣವನ್ನೇ ತಮ್ಮ

ಆಶೀರ್ವಚನದ ಪ್ರಭಾವದ ಮೂಲಕ ಬದಲಾಯಿಸಿ

ಬಿಟ್ಟರು.ನಮ್ಮ ವೈಯಕ್ತಿಕ ಸಾಧನೆ ಬಹಳ ಕಡಿಮೆ

ಇರುವದರಿಂದ ಅವರು ನಮಗೆ ಅರ್ಥವಾಗುವದಿಲ್ಲ

ಅವರು ಇರುವ ಭೂಮಿಕೆ ಎಂತಹುದು ಎಂಬುದು

ನಮಗೆ ಅರಿವಿಗೆ ಬರುವದಿಲ್ಲ ಅಷ್ಟೆ.ಅವರಾಗಿಯೆ 

ಏನಾದರೂ ಹೇಳಿದಾಗ, ಈ ಚಿಂತನೆಯ ಸಮಯದಲ್ಲಿ

ಒಂದು ಸಲ "ನನ್ನ ಸಮಾಧಾನ ಭಂಗ ಮಾಡುವ

ಪ್ರಯತ್ನ ಮಾಡಿರಿ ಇದು ನನ್ನ ಚಾಲೇಂಜ"ಎಂದು

ಅಂದಾಗ, ಮತ್ತೊಮ್ಮೆ.,ಇಲ್ಲಿ ಇರುವವರು, ಇಲ್ಲಿ 

ನಡೆಯುತ್ತಿರುವದೆಲ್ಲ ಚಲನ ಚಿತ್ರದ ಹಾಗೆ ಅನಿಸುತ್ತದೆ,

ಎಲ್ಲರೂ ಆಚೀಚೆ ತಮ್ಮ ತಮ್ಮ ಕೆಲಸಗಳಿಗಾಗಿ

ಧಡಪಡಿಸುತ್ತ ಓಡಾಡುತ್ತಿದ್ದಾರೆ, ಆದರೆ ಇದಾವೂದು

ತಮಗೆ ಅನಿಸುವದಿಲ್ಲ ಎಂದು ಹೇಳಿದಾಗ, ಎಲ್ಲದರ

ಜವಾಬ್ದಾರಿ ಅವರದೇ ಇರುತ್ತದೆ, ಆದರೂ ಈ ರೀತಿ

ಇರುತ್ತಾರೆ ಎಂದಾಗ ಅವರ ಹಾಗೂ ನಮ್ಮ 

ಮಾನಸಿಕ ಭೂಮಿಕೆಯಲ್ಲಿ ತುಂಬಾ ವ್ಯತ್ಯಾಸವಿದೆ,

ಅವರು ತುಂಬಾ ಎತ್ತರದ ಉನ್ನತ ಅವಸ್ಥೆಯಲ್ಲಿ 

ಇದ್ದರೆ ನಮ್ಮದು ನೆಲದ ಮೇಲೆ ಇರುವ ಅವಸ್ಥೆ 

ಇರುತ್ತದೆ.ನನಗೆ ಅದನ್ನು ಸರಿಯಾಗಿ ಹೇಳಲೂ 

ಬರುವದಿಲ್ಲ ,ಕ್ಷಮಿಸಬೇಕು.ಈ ಬರೆಯುವದೂ ಅವರ ಆಶೀರ್ವಾದವೇ ಇರುತ್ತದೆ. ಅವರೂ ಶ್ರೀ ಮಹಾರಾಜರ ಹಾಗೆ ತುರ್ಯಾತೀತ ಅವಸ್ಥೆಯಲ್ಲ ಇದ್ದರೂ ಇರಬಹುದು ನಮಗೆಲ್ಲಿ ಅರ್ಥವಾಗುತ್ತದೆ.

ಇರಲಿ ,ಈ ರೀತಿಯಾದ ತುರೀಯ ,ತುರ್ಯಾತೀತ

ಅವಸ್ಥೆಗಳೂ ಇರುತ್ತವೆ.ಇದರ ಗಾಢತೆಯ ಪರಿಣಾಮದಿಂದ ಸತ್ಪುರುಷರ ದೇಹವೂ ಚಿನ್ಮಯ

ಆಗುತ್ತದೆ.ಇಂತಹ ಸತ್ಪುರುಷರಿಂದ ಕೋಟ್ಯಾವಧಿ ಜನರ ಉದ್ಧಾರವಾಗುತ್ತದೆ.ದೇಹದಿಂದ ಇದ್ದಾಗ ಹೇಗೊ ಅದಕ್ಕಿಂತ ಹೆಚ್ಚು ಕಾರ್ಯ ದೇಹ ಬಿಟ್ಟ ಮೇಲೂ ಮಾಡಬಲ್ಲರು.ಪ.ಪೂ.ಗುರುಗಳು 

ಏನು ಹೇಳುತ್ತಾರೆ ಅಂದರೆ, ದೇವರು ನಮಗೆ ಸ್ವಲ್ಪ

ಬುದ್ಧಿ ಶಕ್ತಿ, , ವಿಚಾರ ಶಕ್ತಿ ಹಾಗೂ ತಿಳುವಳಿಕೆ

ಕೊಟ್ಟಿದ್ದಾನೆ, ನಾಲ್ಕಾರು ಪುಸ್ತಕ ಓದುತ್ತೇವೆ, ಒಂದಷ್ಟು

ಪ್ರವಚನ ಕೇಳುತ್ತೇವೆ, ನಂತರ ಎಲ್ಲ ತಿಳಿದವರ ಹಾಗೆ

ವ್ಯವಹಾರ ಮಾಡುತ್ತೇವೆ, ಇವೆಲ್ಲಕ್ಕೂ ಮೀರಿದ

ಎಷ್ಟೋ ಅವಸ್ಥೆಗಳು ಇವೆ ಎಂಬುವದರ ಬಗೆಗೆ

ವಿಚಾರ ಮಾಡದೆ ,ಸರಿಯಾಗಿ ಸಾಧನೆಗೆ ತೊಡಗದೆ,

ವ್ಯರ್ಥ ಆಯುಷ್ಯ ಕಳೆದುಕೊಂಡು ಬಿಡುತ್ತೇವೆ.

ಇದು ನಿಜವೇ ಇರುತ್ತದೆ.ಶಬ್ದಜ್ಞಾನ ಎಷ್ಟು ಬೇಕು

ಅಷ್ಟೇ , ಅನುಭವ ಜ್ಞಾನ ಮಹತ್ವದ್ದು ಇರುತ್ತದೆ.

ನಮ್ಮ ಭಾರತೀಯ ತತ್ವಜ್ಞಾನ ವೈಶಿಷ್ಟ್ಯ ಎಂದರೆ

ಹೊರಗಿನ ವಿದ್ಯೆ ಎಷ್ಟೇ ಇರಲಿ ಅಥವಾ ಇಲ್ಲದಿರಲಿ

ಕೇವಲ ನಾಮಸ್ಮರಣೆ ,ಭಗವಂತನ ,ಸದ್ಗುರುಗಳ

ಲೀಲೆ ಗಳ ಚಿಂತನೆ ,ನಾಮದ ಅನುಸಂಧಾನ ಮಾತ್ರದಿಂದ ಈ ಎಲ್ಲ ಅವಸ್ಥೆಗಳನ್ನು ಸಾಮಾನ್ಯರು

ಕೂಡಾ ಪಡೆದುಕೊಳ್ಳಬಹುದು.ಇದು ಜಗತ್ತಿಗೆ ,

ಮಾನವ ಕುಲಕ್ಕೆ ಸನಾತನದ ಕೊಡುಗೆಯಾಗಿರುತ್ತದೆ.

ವಾಸನಾ ತ್ಯಾಗದ ಚಿಂತನೆ ಮಾಡೋಣ

ಈ ವಾಸನಾ ,ವಾಸನಾ ಎಂದರೆ ಭಗವಂತನ ನೆರಳು

ಅಥವಾ ಅವನ ..!...

ಅವಧೂತ ತನಯ

*" ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*