Tuesday, January 2, 2024

Shrikant Appaji Ashram Location

 https://maps.app.goo.gl/WFfTPgW9TMKvRHsD6

Tuesday, April 4, 2023

"ಠೇವಿಲೆ ಅನಂತೇ ,ತೈಸೇಚೀ ರಹಾವೇ | ಚಿತ್ತೀ ಅಸೋದ್ಯಾವೇ ಸಮಾಧಾನ||

 ಅವಧೂತ ಚಿಂತನ 5-4-2023

"ಠೇವಿಲೆ ಅನಂತೇ ,ತೈಸೇಚೀ ರಹಾವೇ |

ಚಿತ್ತೀ ಅಸೋದ್ಯಾವೇ ಸಮಾಧಾನ|| 

ಇದರ ಶಬ್ದಶಃ ಅರ್ಥ,"ಭಗವಂತನು ಇಟ್ಟದ್ದರಲ್ಲಿಯೇ

ಸಮಾಧಾನದಿಂದ ಇರಬೇಕು".ಎಂದು ಆಗುತ್ತದೆ.

ಶ್ರೀ ಮಹಾರಾಜರು ಹೇಳುತ್ತಾರೆ,"ಇದರಲ್ಲಿಯೆ 

ಮರ್ಮ ಇದೆ"ಎಂದು.ಹೀಗೆ ಅಂದರೆ ಏನು ಎಂಬುದರ

ಕುರಿತು ಚಿಂತನ ಮಾಡೋಣ."ಭಗವಂತನು ಇಟ್ಟದ್ದರಲ್ಲಿ"ಅಂದರೆ ನಮ್ಮನ್ನು ಇಟ್ಟವನು ಭಗವಂತ 

ಎಂದು.ಇಲ್ಲಿ ನಾವು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ

ಎನ್ನುವುದು ಮಹತ್ವ ಅಲ್ಲ.ಅದು ,ಶ್ರೀಮಂತಿಕೆಯ,

ಬಡತನದ,ಅನಾರೋಗ್ಯದ ಅಥವಾ ಯಾವದೇ

ವ್ಯವಹಾರದ ಒತ್ತಡದ ಅಥವಾ ಮತ್ತೇನೋ ಅನುಕೂಲ ಅಥವಾ ಅನಾನುಕೂಲ ತರಹದ್ದು ಇರಬಹುದು.ಸಾಧಕರಿಗೆ ಮಹತ್ವವಾದದ್ದು ಎಂದರೆ 

ಮನಸ್ಸಿನ ಪ್ರಸನ್ನತೆ.ಈಗ ಉದಾಹರಣೆಗೆ ,ಶ್ರೀ ರಾಮನು ವನವಾಸಕ್ಕೆ ಹೊರಡುವ ಪ್ರಸಂಗ ಬಂದಾಗ

ಸೀತೆಯೂ ವನವಾಸಕ್ಕೆ ಹೊರಡಲು ತಯಾರಾಗುತ್ತಾಳೆ

"ಶ್ರೀ ರಾಮನೊಂದಿಗೆ ಅವನು ಇಟ್ಟ ಪರಿಸ್ಥಿತಿಯಲ್ಲಯೆ

ನನಗೆ ಆನಂದವಿದೆ,ವನವಾಸದ ಕಷ್ಟ ಪರಿಸ್ಥಿತಿಯಲ್ಲಿಯೇ ಸಮಾಧಾನ ಹಾಗೂ ಆನಂದದಲ್ಲಿ

ಇರುತ್ತಾಳೆ.ನಮಗೆ ನಮ್ಮ ಜೀವನದಲ್ಲಿ ಪ್ರಾಪ್ತವಾಗುವ 

ಪರಿಸ್ಥಿತಿಗಳು ನಮ್ಮ ಕೈಯಲ್ಲಿ ಎಲ್ಲಿ ಇರುತ್ತವೆ.ಕೆಲವು

ಸಮಯ ಸ್ವಲ್ಪ ಪ್ರಯತ್ನ ಮಾಡುವದರಲ್ಲಿ ನಮ್ಮ

ಕೆಲಸ ಆಗುತ್ತವೆ.ಕೆಲವೊಮ್ಮೆ ಎಷ್ಟೆಲ್ಲ ಪ್ರಯತ್ನ ಮಾಡಿಯೂ ನಮ್ಮ ಕೆಲಸಗಳು ಆಗುವದಿಲ್ಲ.ಇದರ

ತಾತ್ಪರ್ಯವೇನೆಂದರೆ ಪರಾಕಾಷ್ಠೆಯಲ್ಲಿ ನಮ್ಮಪ್ರಯತ್ನ

ಮಾಡಲೇಬೇಕು.ಪರಿಣಾಮಗಳು ಭಗವಂತನ ಇಚ್ಛೆ

ಎಂಬುದು.ಅದೇ ನಮಗೆ ಭಗವಂತ ಅಥವಾ ಸದ್ಗುರುಗಳ ಮೇಲೆ ನಿಜವಾದ ಪ್ರೇಮ ಇದ್ದರೆ ಪರಿಸ್ಥಿತಿಗಳು ನಮಗೆ ಅನುಕೂಲ ಇರಲಿ ಅಥವಾ ಪ್ರತಿಕೂಲ ಇರಲಿ ಅದಕ್ಕೆ ಮಹತ್ವ ಅನಿಸುವದಿಲ್ಲ.

ಆದ್ದರಿಂದ ಭಗವಂತನ ಅಥವಾ ಸದ್ಗುರುಗಳ ಮೇಲಿನ

ಪ್ರೇಮ,ಭಕ್ತಿ,ಶ್ರದ್ಧೆ ಇವುಗಳಿಗೆ ಮಹತ್ವ ಇರುತ್ತದೆ.ಇದನ್ನು

ನಾವು ಬೆಳೆಸಿಕೊಳ್ಳುವದರಲ್ಲಿಯೆ ನಾಮಸ್ಮರಣೆಯ

ಮಹಾನತೆ ಇರುತ್ತದೆ.ಹೇಗೆ ನಾಮದ ಪ್ರೇಮ

ಬೆಳೆಯುತ್ತದೆಯೊ ಹಾಗೆ ಅಂತರಂಗದಲ್ಲಿ ಪ್ರಸನ್ನತೆ

ಬೆಳೆಯುತ್ತದೆ.ಭಗವಂತನ ಅಥವಾ ಸದ್ಗುರುಗಳ ಮೇಲಿನ ಪ್ರೇಮದಿಂದ ಇರುವ ಪರಿಸ್ಥಿತಿಯಲ್ಲಿ ಸಮಾಧಾನದಿಂದ ಇರಬೇಕು.ನಾಮಸ್ಮರಣೆಯಿಂದ ಇದನ್ನು ಸಾಧಿಸಿ ,ಪರಮಾರ್ಥ ಸಾಧನೆಯಲ್ಲಿ ಅಂತರಂಗ ಮಾರ್ಗದಲ್ಲಿ ಮುಂದುವರಿಯಬೇಕು.

ಅವಧೂತ ತನಯ

ಜಾನಕೀ ಜೀವನ ಸ್ಮರಣ ಜಯ ಜಯ ರಾಮ.

Wednesday, March 22, 2023

ಮೂರ್ಖನ ಲಕ್ಷಣಗಳು

 ದಾಸಬೋಧಾಮೃತ ಚಿಂತನ ;

( ಮೂರ್ಖ ಲಕ್ಷಣ)

ಪ್ರಪಂಚವೇ ಸಂಪೂರ್ಣ ಸತ್ಯವೆಂದು ತಿಳಿದು ಜೀವನ ಬಾಳುವ ಅಜ್ಞಾನಿ ಮನುಷ್ಯನು ಶ್ರೀ ಸಮರ್ಥರ ಅಭಿಪ್ರಾಯದಂತೆ ಮೂರ್ಖನಾಗಿರುತ್ತಾನೆ.ಈ ಮೂರ್ಖನು ಅತ್ಯಂತ ಸ್ವಾರ್ಥಿ ಆಗಿರುತ್ತಾನೆ.ಇದರಿಂದಾಗಿ ಜಗತ್ತು ತನ್ನ ಸುಖಕ್ಕಾಗಿಯೆ ಇರುತ್ತದೆ ಎಂದು ತಿಳಿದು ,ನಾನು ನನ್ನದು ಇದರ ಆಚೆಗೆ ಅಂಥವನಿಗೆ ಏನೂ ಕಾಣುವುದೇ ಇಲ್ಲ.ನಾನು ದೇಹವೇ ಇರುತ್ತೇನೆ ಎಂದು ಅತ್ಯಂತ ಧೃಢವಾಗಿ ತಿಳಿದು ಅದರ ಅಂದರೆ ದೇಹಸುಖಕ್ಕಾಗಿ ಯಾವಾಗಲೂ ಚಿಂತನ ಮಾಡುತ್ತಿರುತ್ತಾನೆ.ಎಲ್ಲ ವಿಕಾರಗಳೂ ತುಂಬಿ ಅವನ ಮನಸ್ಸು ದ್ವೇಷ ಮತ್ಸರ ಇವುಗಳಿಂದ ತುಂಬಿರುತ್ತದೆ ಎನ್ನುವುದರಲ್ಲಿ ಯಾವದೇ ಆಶ್ಚರ್ಯವಿಲ್ಲ.ವಿಕಾರಗಳ ವಶನಾಗಿ ಸುಖ ಅನುಭವಿಸುವಾಗ ,ತನ್ನ ಮನಸ್ಸಿನ ಅಥವಾ ಜನರ ಲಜ್ಜೆ ಮರ್ಯಾದೆಗಳನ್ನು ಲಕ್ಷಿಸುವುದಿಲ್ಲ.ಯಾವದೇ ಪ್ರಕಾರದ ಧರ್ಮ ನೀತಿ ,ನ್ಯಾಯ ಇವುಗಳ ಅಭಿಮಾನ ಇಟ್ಟುಕೊಳ್ಳದೆ ಯಾವದೇ ಪ್ರಕಾರ ಅಂದರೆ ನೀತಿ,ಅನೀತಿಗಳ ವಿಚಾರ ಮಾಡದೆ ಬಹಳಷ್ಟು ಧನ ಸಂಪಾದನೆ ಮಾಡುತ್ತಾನೆ.ಜೀವನದಲ್ಲಿ ಅವನಿಗೆ ತಂದೆ, ತಾಯಿ ,ಗುರು, ದೇವರು ಇವರುಗಳಲ್ಲಿ ಯಾರೂ ಪೂಜ್ಯರೆನಿಸುವದಿಲ್ಲ.ಏನಾದರೂ ಸುಖದ ಕೊರತೆಯಾದಾಗ ದೇವರು ನೆನಪಾಗಿ ,ನನ್ನ ಪ್ರಪಂಚದಲ್ಲಿ ಸುಖಗಳನ್ನು ಏಕೆ ಕಡಿಮೆ ಮಾಡಿರುವಿ ಎಂದು ಅವನನ್ನು ಬಯ್ಯುತ್ತಾನೆ.ಚಂಚಲ ಬುದ್ಧಿಯ ಇಂಥ ಮೂರ್ಖ ಮನುಷ್ಯನು ಪ್ರೀತಿಯ ಜನರೊಂದಿಗೆ ಎಂದೂ ಪ್ರೇಮದಿಂದ ವರ್ತಿಸುವದಿಲ್ಲ.ಆಲಸ್ಯದಿಂದ ಸಮಯ ಕಳೆಯುತ್ತ ಯಾವಾಗಲೂ ಚಿಂತಾಗ್ರಸ್ತನಾಗಿ ಇರುತ್ತಾನೆ.ಒಟ್ಟಿನಲ್ಲಿ ಸಮಾಜದಲ್ಲಿಯ ಅತ್ಯಂತ ಸ್ವಾರ್ಥಿ, ವಿಕಾರವಶ, ಕುವಿಚಾರಿ ,ಭೋಗಿ, ಹೀನಲಕ್ಷಣವುಳ್ಳ ಹಾಗೂ ಆಲಸ್ಯ ತುಂಬಿ ತಾಮಸಿಯಾಗಿರುವವನು ,ಶ್ರೀ ಸಮರ್ಥರ ಅಭಿಪ್ರಾಯದ ಮೂರ್ಖ ಮನುಷ್ಯನಾಗಿರುತ್ತಾನೆ 

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Friday, January 20, 2023

ವಾಸನಾ ಎಂದರೇನು?

 Study Circle- ಚಿಂತನಾ ಸರಣಿ -26 ದಿ.21-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ವಸ್ ಧಾತುವಿನಿಂದ ವಾಸನಾ ಶಬ್ದವಾಗಿರುತ್ತದೆ.

ಅಂದರೆ ಯಾವುದು ತೆಗೆದುಕೊಂಡು ಹೋಗಿ ದೃಶ್ಯದಲ್ಲಿ

ನಿಲ್ಲಿಸುತ್ತದೆಯೋ ಅದು ವಾಸನೆಯಾಗಿರುತ್ತದೆ.

ಯಾವುದು ನನಗೆ ಮನಸ್ಸಿನಲ್ಲಿ ಸ್ವಸ್ಥವಾಗಿ ಇರಗೊಡುವದಿಲ್ಲವೋ ,ನಮ್ಮನ್ನು ಹೊರಗೆ ನುಗಿಸಿ 

ದೃಶ್ಯದಲ್ಲಿ ಕೂಡಿಸುತ್ತದೆಯೊ ಅದು ವಾಸನೆ.ನಮ್ಮ

ಪ್ರವೃತ್ತಿಯ ,ಹೊರಗಿನಿಂದ ಸುಖ ಪಡೆಯುವ ಯಾವ

ಓಟ ಇರುತ್ತದೆಯೊ ಅದು ವಾಸನೆ.ಯಾವ ಯಾವ

ಇಂದ್ರಿಯಗಳಿಂದ ಯಾವ ಯಾವ ಭೋಗವಿರುತ್ತದೆ,

ಅವುಗಳಿಂದ ಸುಖ ಪ್ರಾಪ್ತವಾಗಬಹುದೆಂಬ ಯಾವ

ಆವೇಶವಿರುತ್ತದೆಯೋ ಅದೇ ವಾಸನೆಯಾಗಿರುತ್ತದೆ.

ಎಲ್ಲಿ ವಾಸನೆ ಇರುತ್ತದೆಯೊ ಅಲ್ಲಿ, ಅಜ್ಞಾನ, ಆಕುಂಚಿತ

ವೃತ್ತಿ ,ಬಂಧನ , ಹಾಗೂ ಸಣ್ಣತನಗಳು ಬಂದೇ ಬರುತ್ತವೆ.ಈ ಆಕುಂಚಿತ ಭಾವ ಬಂದೊಡನೆ ,ನಮ್ಮ

ಮೂಲ ಆನಂದ ಸ್ವರೂಪದ ಮೇಲೆ ಆವರಣ ನಿರ್ಮಾಣವಾಗಿ ಆನಂದಲೋಪ ವಾಗಿ ಮುಂದೆ

ಅಜ್ಞಾನದ ಕತ್ತಲೆ ಆವರಿಸಿ ದುಃಖದ ನಿರ್ಮಾಣ

ಆಗುತ್ತದೆ.ಈ ವಾಸನೆಗೆ ಭಗವಂತನ ಮಾಯೆ ಎಂದೂ

ಅನ್ನುತ್ತಾರೆ.ಇದು ಕತ್ತಲಿನ ಪ್ರತೀಕ, ಅಂದರೆ ಅಲ್ಲಿ

ಭಗವಂತನ ವಿಸ್ಮರಣೆ ಆಗುತ್ತದೆ.ಇದು ಭಗವಂತನ

ನೆರಳಿನಂತೆ ಇರುತ್ತದೆ.ಯಾವ ರೀತಿ ಮೋಡಗಳು 

ಸೂರ್ಯನನ್ನು ಮುಚ್ಚಿ ಅಂಧಕಾರ ಉಂಟು 

ಮಾಡುವವೊ ಹಾಗೆ ಈ ಮಾಯೆಯು ಭಗವಂತನ

ನೆರಳಿನಂತೆ ಇದ್ದು ನಮ್ಮಿಂದ ಭಗವಂತನನ್ನು ದೂರ

ಮಾಡುತ್ತದೆ.ಆದ್ದರಿಂದ ವಾಸನೆಗಳು ಭಗವಂತನವರೆಗೆ

ಮುಟ್ಟುತ್ತವೆ.ಆದ್ದರಿಂದ ನಮ್ಮ ಸ್ವ ಪ್ರಯತ್ನ, ಅಥವಾ

ಭಗವಂತನನ್ನು ಹೊರತು ಪಡಿಸಿ ಅನ್ಯ ಸಾಧನೆಗಳಿಂದ

ವಾಸನೆಯನ್ನು ನಿಯಂತ್ರಣ ಮಾಡಲು ಆಗುವದಿಲ್ಲ.

ಭಗವಂತನ ಅಥವಾ ಸದ್ಗುರುಗಳ ಅನುಗ್ರಹದ

ಸಹಾಯ ಇಲ್ಲದೆ ಈ ವಾಸನೆಯನ್ನು ಸರಿಸಿ ಭಗವಂತನ

ದರ್ಶನ ಮಾಡಲು ಆಗುವದಿಲ್ಲ.ಈ ಅನುಗ್ರಹ ಎಂದರೆ

ಭಗವಂತನ ಶಾರದಾ ಶಕ್ತಿ ಅಥವಾ ಜ್ಞಾನ ಶಕ್ತಿ.ಇದು

ಆನಂದರೂಪದ ಶಕ್ತಿ ಇರುವದರಿಂದ ಅಜ್ಞಾನ ಅಥವಾ

ಮಾಯೆಯ ಪ್ರಭಾವ ನಾಶ ಮಾಡುವದರಲ್ಲಿ ಇದರಷ್ಟು

ಪ್ರಬಲವಾದ ಉಪಾಯ ಬೇರೆ ಯಾವದೂ ಇಲ್ಲ.

"ಎಲ್ಲಿ ಭಗವಂತನ ನಾಮದ ವಿಸ್ಮರಣ"."ಅಲ್ಲಿ ಮಾಯೆಯ ಸ್ಫುರಣ, ಎಲ್ಲಿ ಅಖಂಡ ನಾಮದ ಸ್ಮರಣ ಅಲ್ಲಿ ಮಾಯೆಯ ಅಂದರೆ ವಾಸನೆಯ ಮರಣ"

ಈ ವಾಸನೆಯೆಂದರೆ ಮುದ್ದುಮಾಡಿದ ನಾಯಿಯಂತೆ

ಇರುತ್ತದೆ.ಸುಮ್ಮನೆ ಹಚ್ ಹಚ್ ಎಂದರೆ ಹೋಗುವುದಿಲ್ಲ.ಮನುಷ್ಯನಲ್ಲಿ ಈ ವಾಸನಾ ಶಕ್ತಿಯು

ಬೇಕು-ಬೇಡ ಎಂಬ ಭಾವನೆಗಳ ರೂಪದಲ್ಲಿ 

ವ್ಯಕ್ತವಾಗುತ್ತದೆ.ಆದರೆ ಜ್ಞಾನಶಕ್ತಿಯಾದ ಶಾರದೆಯು

ವಾಣಿಯ ರೂಪದಲ್ಲಿ ಪ್ರಕಟವಾಗುತ್ತದೆ.ವಾಸನೆ ಹಾಗೂ ಶಾರದಾ ಶಕ್ತಿ ಎರಡೂ ಸೂಕ್ಷ್ಮ , ಸರ್ವವ್ಯಾಪಿ 

ಹಾಗೂ ಸಾಮರ್ಥ್ಯವಾನ್ ಇರುತ್ತವೆ.ಇವು ಭಗವಂತನ

ಶಕ್ತಿಗಳೆ ಆದರೂ ಎರಡೂ ಶಕ್ತಿಗಳಲ್ಲಿ ಮಹತ್ವದ 

ಭೇದವಿರುತ್ತದೆ.ವಾಸನೆಯು ಅಧೋ ಅಂದರೆ ಕೆಳಮುಖವಾಗಿ ದೃಶ್ಯದ ಕಡೆಗೆ ಆದರೆ ,ಶಾರದೆಯು 

ಊರ್ಧ್ವಮುಖ ಅಂದರೆ ಅವ್ಯಕ್ತದ ಕಡೆಗೆ ಇರುತ್ತದೆ.

ವಾಸನೆಯಿಂದ ಉಪಾಧಿಗಳು ಬೆಳೆಯುತ್ತವೆ.

ಶಾರದೆಯಿಂದ ಉಪಾಧಿಗಳು ಕಡಿಮೆ ಆಗುತ್ತವೆ.

ವಾಸನೆಯು ಜೀವವನ್ನು ಆಕುಂಚಿತಗೊಳಿಸಿದರೆ,

ಶಾರದೆಯು ಅದನ್ನು ವಿಶಾಲಗೊಳಿಸುತ್ತದೆ.ಯಾವದು

ಅಂತಃಕರಣದಲ್ಲಿ ಸೇರಿಕೊಂಡು ಬಂಧನವನ್ನು

ಉಂಟು ಮಾಡುತ್ತದೆಯೊ ಅದು ವಿಷಯವಾಗಿರುತ್ತದೆ.

ಯೋಗವಾಸಿಷ್ಠದಲ್ಲಿ ಶುಭವಾಸನೆ ಮತ್ತು ಅಶುಭವಾಸನೆ ಎಂದು ಹೇಳಿ ಈ ಎರಡೂ ವಾಸನೆಗಳು

ದೂರವಾಗಬೇಕೆಂದು ಹೇಳಿರುತ್ತಾರೆ.ಅಂದರೆ 

ಈ ಬಂಧನದ ಪಾಶ ಎಷ್ಟೊಂದು ಸೂಕ್ಷ್ಮವಾಗಿರುತ್ತದೆ

ನೋಡಿರಿ.ಕಾಮವಾಸನೆ, ದುಡ್ಡಿನವಾಸನೆ, ಹಾಗೂ 

ಲೌಕಿಕದ ವಾಸನೆ ಈ ಮೂರು ವಾಸನೆಗಳಲ್ಲಿಯೆ

ನಾವು ಸುತ್ತುವರಿಯುತ್ತ ಇರುತ್ತೇವೆ.ಇವುಗಳನ್ನು

ಮನಸ್ಸಿನಿಂದ ನಿರ್ಮೂಲ್ಯ ಭಾವದಿಂದ ಉಪೇಕ್ಷೆ

ಮಾಡುವುದೇ ವೈರಾಗ್ಯವಾಗಿರುತ್ತದೆ.ಹಾಗೆಂದು

ವ್ಯವಹಾರದಲ್ಲಿ ಉಪೇಕ್ಷೆ ಮಾಡಬೇಕು ಅನ್ನುವದಲ್ಲ.

ನಿರ್ಮೂಲ್ಯ ಭಾವ ಎಂದರೆ ಅವು ಬೇಕಾರ ಅಂದರೆ

ಭಗವಂತನ ದರ್ಶನ ಮಾರ್ಗಕ್ಕೆ ನಿರುಪಯೋಗಿ

ಆಗಿರುತ್ತವೆ.ಇದಕ್ಕೆ ಒಂದು ಉದಾಹರಣೆ ಏನೆಂದರೆ,

ಒಬ್ಬನು ಚಾತುರ್ಮಾಸದಲ್ಲಿ ತಲೆ ಕೂದಲು ಹಾಗೂ ಗಡ್ಡ ಬೆಳೆಸಿದನು.ಅವುಗಳಿಗೆ ಎಣ್ಣೆ ಹಚ್ಚಿ ಉಪಚಾರ

ಮಾಡಿ ಬೆಳೆಸಿದನು.ಚಾತುರ್ಮಾಸ ಮುಗಿದ ನಂತರ

ಅವುಗಳನ್ನು ಸಂಪೂರ್ಣ ತೆಗೆಸಿದನು, ಆಗ ಆ ತೆಗೆದ

ಕೂದಲುಗಳನ್ನು ಎಷ್ಟು ತುಚ್ಛತೆಯಿಂದ ನೋಡುತ್ತಾನೆ.

ಅವನ್ನೇನು ತೆಗೆದಿಟ್ಟುಕೊಳ್ಳುವನೇ ,ಇಲ್ಲ.ಹಾಗೆ ನಾವೇ

ಆಟವಾಡಿದ ಈ ಪ್ರಪಂಚದ ಕಡೆಗೆ ನಮ್ಮದೇ ದೃಷ್ಟಿಯಲ್ಲಿ ಆ ತೆಗೆದ ಕೂದಲಿನ ಕಡೆಗೆ ಎಷ್ಟು ತುಚ್ಛತೆ

ಭಾವ ಇರುವುದೊ ಅದೇ ಭಾವದಿಂದ ನೋಡುವ ಕಲೆ

ಬರಬೇಕು.ಇದು ನಿಜವಾದ ವೈರಾಗ್ಯವಾಗಿರುತ್ತದೆ.

ಇದಕ್ಕಾಗಿ ಮನೆ ಮಾರು ಹೆಂಡತಿ ಮಕ್ಕಳು ,ಎಲ್ಲ ಬಿಟ್ಟು

ಅರಣ್ಯಕ್ಕೆ ಹೋಗುವುದೇನೂ ಬೇಕಾಗಿಲ್ಲ.ಪ್ರಪಂಚ,

ಪರಿಸ್ಥಿತಿ, ಜಗತ್ತಿನ ಕಡೆಗೆ ನೋಡುವ ನಮ್ಮ ದೃಷ್ಟಿ

ಬದಲಾಗಬೇಕು.ಇದೆನೊ ಅಂದಷ್ಟು ಸುಲಭವಲ್ಲ.

ಈ ವಾಸನೆಗಳ ತ್ಯಾಗದ ಅಭ್ಯಾಸವೇ ನಾಮಸಾಧನೆ

ಆಗಿರುತ್ತದೆ.

ನಾಮ ಎಂದರೆ ಏನು, ನಾಮಸಾಧನೆ ಏನಿರುತ್ತದೆ?!!!..

ಅವಧೂತ ತನಯ

*" ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Saturday, January 14, 2023

ಜೀವನದ ಗುರಿ ಏನು ಇರಬೇಕು ?

 Study Circle- ಚಿಂತನಾ ಸರಣಿ -8, ದಿ.14-12-22

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ನಾವು ಚಿಕ್ಕವರಿದ್ದಾಗ ಅಂದರೆ 5,6ಅಥವಾ7 ಕ್ಲಾಸ್

ಓದುತ್ತಿರುವಾಗ ,ಏನಾದರೂ ವಿಷಯಕೊಟ್ಟು ಅದರ

ಮೇಲೆ ಒಂದು ಪುಟದಷ್ಟು ಪ್ರಬಂಧ ಬರೆಯಲು

ಹೇಳುತ್ತಿದ್ದರು.ಅಂತಹ ಒಂದು ವಿಷಯ ಒಂದು ಇತ್ತು

ಅದೇನೆಂದರೆ " ಜೀವನದ ಗುರಿ ಏನು ಇರಬೇಕು ?

ಅದಕ್ಕೆ ಸಾಮಾನ್ಯವಾಗಿ ಹೇಳುವಾಗ "ಗುರಿ ಇಲ್ಲದ

ಜೀವನ ಎಂದರೆ ,ಗಾಳಿಪಟ ಅಥವಾ ಯಾವದೇ ದಿಕ್ಕು ದೆಸೆ ಇಲ್ಲದ ಸಮುದ್ರದಲ್ಲಿ ಹೊರಟ ಹಡಗಿನಂತೆ.

ಅದು ಯಾವ ದಡ ಮುಟ್ಟುತ್ತದೆ ಗೊತ್ತಿಲ್ಲ ಅಥವಾ 

ಸಮುದ್ರದ ಯಾವದೋ ಭಾಗದಲ್ಲಿ ಯಾವಾಗ

ಮುಳುಗುತ್ತದೆ ಗೊತ್ತಿಲ್ಲ.ಹಾಗೆಯೆ ನಿರ್ದಿಷ್ಟ ಗುರಿ ಅಥವಾ ಏನಾದರೂ ಸಾಧಿಸಬೇಕು ಎಂಬ ನಿರ್ಧಾರ

ಇಲ್ಲದ ಜೀವನದ ಗತಿ ಹೀಗೆಯೇ ಆಗುತ್ತದೆ. 

ಪ.ಪೂ.ಗುರುಗಳು ಹೇಳುತ್ತಾರೆ, ಈಗ ನಾವು ಹೇಗೆ

ಆಗಿದ್ದೇವೆ ಎಂದರೆ ಎಂದೂ ಮುಗಿಯದ ಈ ಪ್ರಪಂಚದ ಕಥೆಯಲ್ಲಿಯೆ ನಾವು ರಮಿಸುತ್ತೇವೆ, ಅದರಲ್ಲಿಯೆ ನಮ್ಮ ಜೀವನ ಸಾರ್ಥಕ ಎಂದುಕೊಂಡು

ಹೊರಟು ಬಿಟ್ಟಿದ್ದೇವೆ.ಹುಟ್ಟಿದಾರಭ್ಯ ಇಂದಿನವರೆಗೂ

ಒಂದು ಸಲವಾದರೂ ಸುಮ್ಮನೆ ಏಕಾಂತದಲ್ಲಿ ಕುಳಿತು

ಏಕೆ , ಹೇಗೆ ಹುಟ್ಟಿದ್ದೇವೆ? ಏಲ್ಲಿಗೆ ಹೀಗೆ ಹೋಗುತ್ತೇವೆ?

ಇದರ ಬಗೆಗೆ ಒಮ್ಮೆಯಾದರೂ ವಿಚಾರ ಮಾಡಿರುತ್ತೇವೆಯೇ,ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳೋಣ.ಎಂದೂ ಮುಗಿಯದ ಕಥೆ ಎಂದರೇನು ನೋಡೋಣ.

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು.ಅವನಿಗೆ ಕಥೆ ಕೇಳುವ ಬಯಕೆ ಆಯಿತು.ಅದೂ ಕೂಡಾ ನಿರಂತರ 

ಅಂದರೆ ಮುಗಿಯದೇ ಇರುವ ಕಥೆ ಇರಬೇಕು.ಅಂತಹ

ಕಥೆ ಹೇಳುವವರಿಗೆ ಲಕ್ಷ ಬಂಗಾರದ ವರಾಹ ಕೊಡುವದಾಗಿ ರಾಜ್ಯದಲ್ಲಿ ಡಂಗುರ ಸಾರಿಸಿದ.

ಪ್ರವಚನ ಕಾರರು,ಕಥಾಕಾರರು.ನಾನಾ ಜನ ಬಂದು,

ರಾಮಾಯಣ, ಮಹಾಭಾರತ, ಭಾಗವತ, ಹದಿನೆಂಟು

ಪುರಾಣ ಎಲ್ಲವೂ ಮುಗಿದವು.ಇನ್ನೂ ಏನು ಹೇಳಬೇಕು ಎಂದು ಈ ವಿದ್ವಾಂಸರು ,ಪಂಡಿತರು ಸಭೆ

ಮಾಡಿ ಚಿಂತನೆ ಮಾಡತೊಡಗಿದರು ನಿರಂತರ

ಎಂದೂ ಮುಗಿಯದ ಕಥೆ ಎಂದರೆ ಎಂತಹದು 

ಎನ್ನುವ ವಿಚಾರಕ್ಕೆ ತೊಡಗಿದರು.ಇವರ ಈ ಸಭೆಯ

ಗದ್ದಲಕ್ಕೆ ಅಲ್ಲಿಯೇ ಇದ್ದ ಹಿರಿಯ ವಯಸ್ಸಾದ ಒಕ್ಕಲಿಗ ರೈತನೊಬ್ಬ ಅಲ್ಲಿಯ ಪಂಡಿತರನ್ನು ವಿಚಾರಿಸಿದ, ಅವರು ರಾಜ ಹೇಳಿದ ವಿಚಾರ ಹೇಳಿದರು.ಆಗ ಅವನು ನಾನು ಅಂತಹ ಕಥೆ 

ಹೇಳುತ್ತೇನೆ ನನ್ನನ್ನು ರಾಜನ ಕಡೆಗೆ ಕರೆದೊಯ್ಯಿರಿ

ಎಂದು ಹೇಳಿದ.ಅದನ್ನೂ ಈ ಪಂಡಿತರು ಹಾಸ್ಯ

ಮಾಡಿದರು.ಅವನೇನು ಅವರನ್ನು ಪರಿಗಣಿಸದೆ 

ನೀವು ಕರೆದುಕೊಂಡು ಹೋಗಿ ರಾಜನನ್ನು

ಭೆಟ್ಟಿ ಮಾಡಿಸಿ ನೋಡಿರಿ ಎಂದ.ಆಯಿತು ಎಂದು

ಅವನನ್ನು ರಾಜನ ಕಡೆಗೆ ಕರೆದುಕೊಂಡು ಹೋದರು.

ರಾಜನೂ ಆಶ್ಚರ್ಯದಿಂದ ಇವನ ಕಡೆ ನೋಡಿದ.ಅವನು ಮಹಾರಾಜರೇ ಒಂದು ಅವಕಾಶ

ಕೊಟ್ಟು ನೋಡಿರಿ ಎಂದು ಹೇಳಿದ.ರಾಜ ಮಂತ್ರಿಯ

ಕಡೆ ನೋಡಿದ.ಮಂತ್ರಿ ಕೊಡಿರಿ ಎಂದು ಹೇಳಿದ.

ಆಯಿತು ಹೇಳು ಎಂದು ರಾಜ ಹೇಳಿದ.ಅದಕ್ಕೆ ಅವನು

ನೋಡಿ ಮಹಾರಾಜರೇ ಕಥೆ ಹೇಳುವವರು 

ಮೇಲೆ ಕೂಡಬೇಕು ,ಕೇಳುವವರು ಕೆಳಗೆ ಕೂಡಬೇಕು

ಅಲ್ಲವೇ ಅಂತ ಅಂದ.ಆಯಿತು ಎಂದು ಅವನಿಗೆ 

ಸಿಂಹಾಸನ ಬಿಟ್ಟು ಕೆಳಗೆ ಕುಳಿತ.ನೋಡಿ ರಾಜರೇ

ಇದು ಏನೊ ಸರಿ ಆದರೆ ತಲೆಯ ಮೇಲಿ ಕಿರೀಟ 

ಇಟ್ಟುಕೊಂಡು ಹೇಳುವವರಿಗಿಂತ ಕೇಳುವವರು ಕುಳಿತರೆ ತಪ್ಪಲ್ಲವೇ ಅಂದ ,ಆಯಿತು ಎಂದು ಕಿರೀಟ 

ತೆಗೆದು ರಾಜ ಕುಳಿತ.ರಾಜರೆ ಕಥೆ ಆರಂಭದ

ಮುನ್ನ ಕಥೆ ಹೇಳುವವರಿಗೆ ಶಾಲು ಸನ್ಮಾನ ಮಾಡಿ

ಹಾರ ,ಟೋಪಿ ಹಾಕುವರು ಎಂದು ಕೇಳಿದ್ದೇನೆ ಎಂದ

,ರಾಜ ಇದೇನೂ ಸ್ವಲ್ಪ ಅತಿ ಆಯಿತು ಎನಿಸಿ ಮಂತ್ರಿಯ

ಕಡೆಗೆ ನೋಡಿದ, ಅದಕ್ಕೆ ಮಂತ್ರಿ ಕಥೆ ಕೇಳಬೇಕು

ಅಂದರೆ ಕಥಾಕಾರರಿಗೆ ಸನ್ಮಾನ ಮಾಡಬೇಕು ಎಂದು

ಹೇಳಿದ.ಅದೂ ಆಯಿತು ಇನ್ನಾದರೂ ಕಥೆ 

ಪ್ರಾರಂಭ ಮಾಡು ಎಂದು.ಆಯಿತು ಎಂದು ಹೇಳಿ,

ಒಂದು ಊರಿನಲ್ಲಿ ಒಬ್ಬನಿದ್ದ.ಅವನು ಮದುವೆ 

ವಯಸ್ಸಿಗೆ ಬಂದ ಅವನ ತಂದೆ ತಾಯಿ ಅವನಿಗೆ

ಮದುವೆ ಮಾಡಿದರು.ಮುಂದೆ ಅವನಿಗೆ ಒಬ್ಬ ಮಗ

ಹುಟ್ಟಿದ, ಅವನೂ ಶಾಲೆ ವಿದ್ಯೆ ಕಲಿತು ಕೆಲಸ

ಪ್ರಾರಂಭಿಸಿದ, ಅವನು ವಯಸ್ಸಿಗೆ ಬಂದ ಕೂಡಲೆ

ತಂದೆ ತಾಯಿ ಅವನಿಗೆ ಕನ್ಯಾ ಶೋಧ ಮಾಡಿ

ಮದುವೆ ಮಾಡಿದರು.ಮುಂದೆ ಎರಡು ಮೂರು

ವರ್ಷ ನಂತರ ಅವನಿಗೂ ಮಕ್ಕಳಾದವು.

ಅವೂ ಹೀಗೆಯೆ ಬೆಳೆದು ವಯಸ್ಸಿಗೆ ಬಂದವು, ಮಗಳಿಗೆ ವರ ನೋಡಿ ಮದುವೆ ಮಾಡಿದ .ನಂತರ

ಮಗನಿಗೂ ಮದುವೆ ಮಾಡಿದ.ಮುಂದೆ ಅವರಿಗೆ 

ಮಕ್ಕಳಾದವು ,ಅವೂ ಬೆಳೆದು ವಯಸ್ಸಿಗೆ ಬಂದವು,

ಅವರಿಗೂ ಮದುವೆ ಆಯಿತು, ಮತ್ತೆ ಅವರಿಗೆ

ಮಕ್ಕಳಾದವು..ರಾಜ ಮಂತ್ರಿಗೆ ಹೇಳಿದ ಇವನಿಗೆ

ಬಹುಮಾನದ ಹಣ ಕೊಟ್ಟುಕಳಿಸು ಎಂದು.

ಹೀಗೇಯೇ ನಮ್ಮದೂ ಇರುತ್ತದೆ.ನಮ್ಮ ಹಿಂದಿನವರು

ಮದುವೆ ಆದರು ಅವರ ಮಕ್ಕಳು ಮುಂದೆ ದೊಡ್ಡವರಾಗಿ ಮದುವೆ ಆದರು ಅವರಿಗೆ ನಾವು ಹುಟ್ಟಿ

ಮುಂದೆ ಹೀಗೆಯೇ ಈ ಕಥೆ ನಡೆದೇ ಇರುತ್ತದೆ.

ನಮಗೆ ಈ ನಿರಂತರ ಕಥೆಯಲ್ಲಿಯೇ ಜೀವನ ರಮಿಸುತ್ತದೆ.ದೇವರು ಬೇಕು ಆದರೆ ಏಕೆ ಎಂದರೆ

ನಮ್ಮ ಪ್ರಪಂಚ ಇನ್ನಷ್ಟು ಶ್ರೀಮಂತ ಆಗಲಿ, ಸಮೃದ್ಧಿ

ಆಗಲಿ ಮಕ್ಕಳಿಗೆ ದೊಡ್ಡ ಶಿಕ್ಷಣ ಸಿಗಲಿ ,ಸೊಸೆ

ವಿದ್ಯಾವಂತೆ ಇರಲಿ.ಇಬ್ಬರೂ ಬಹಳಷ್ಟು ದುಡ್ಡು

ಗಳಿಸಿ ಆರಾಮ ಇರಲಿ.ಹೀಗೆಯೇ ಈ ನಿರಂತರ

ಕಥೆಯೇ ನಮ್ಮ ಜೀವನ ಆಗಿಬಿಟ್ಟಿದೆ.ಇದೇನೂ

ಯಾವಾಗಲೂ ಹೀಗೇಯೇ ಇರುತ್ತದೆ ಎಂದು

ತಿಳಿದಿದ್ದೇವೆ.ಈ ಜೀವನದಲ್ಲಿ ಎಷ್ಟು ದುಃಖಮಯ

ನೋವು ತುಂಬಿದ ಅನುಭವ ಇದ್ದರೂ ನಾವು ಇದರಿಂದ

ಪಾರಾಗುವ ದಾರಿ ಗೊತ್ತಾದರೂ ಆ ಕಡೆಗೆ ಪ್ರವೃತ್ತರಾಗುವದಿಲ್ಲ.

ಶ್ರೀ ಮಹಾರಾಜರು ಹೇಳುತ್ತಾರೆ ಈ ಪ್ರಪಂಚ ಎಂದರೆ

ಹಸಿಮಣ್ಣಿನ ಗೋಡೆ ಇದ್ದಂತೆ.ಎಷ್ಟೊಂದು ಅಪ್ರತಿಮ

ನೋಡಿ.ಸ್ವಚ್ಛಗೊಳಿಸಲು ಎಷ್ಟು ನೀರು ಹಾಕಿದರೂ

ರಾಡಿ ಹೊಲಸೇ ಬರುವದು.ಇನ್ನೂ ಹೇಳುತ್ತ ,

ಪ್ರತಿಯೊಬ್ಬರೂ ದಿನಕ್ಕೆ ಒಮ್ಮೆಯಾದರೂ ಹೋಗಿ

ವಿಸರ್ಜಿಸುವ ಮಲ ಯಾವ ಬಣ್ಣದ್ದಾದರೂ ಅದು

ಅದೇ ಹೊಲಸೇ ,ಅಂದರೆ ಪ್ರಪಂಚ ಎಂತಹದಾದರೇನು

ಶ್ರೀಮಂತರಾದಾದರೇನು ,ಬಡವರದಾದರೇನು

ವಿದ್ವಾಂಸರದಾದರೇನು, ಅಶಿಕ್ಷಿತರಾದರೇನು, ಎಲ್ಲವೂ

ಅಷ್ಟೇ.ಹೊಲಸು ಹೊಲಸೇ ಅಷ್ಟೇ,

ಇನ್ನು ಶ್ರೀ ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ,

ನಾವು ಎಷ್ಟು ಪ್ರಪಂಚದಲ್ಲಿ ಮುಳುಗಿದ್ದೇವೆ ಅಂದರೆ,

ಒಂದು ದಪ್ಪನಾದ ಹಾಸಿಗೆಗೆ ಕೆಳಗೆ ಬೆಂಕಿ ಹತ್ತಿದೆ,

ಆದರೆ ಮೇಲೆ ಅದರ ಅರಿವೇ ಇಲ್ಲದೇ ಗಡದ್ದಾಗಿ

ಗೊರಕೆ ಹೊಡೆಯುವವನ ಹಾಗೆ ಇದೆ, ಮೃತ್ಯು 

ಯಾವ ಕ್ಷಣದಲ್ಲಿ ನಮ್ಮನ್ನು ಒಯ್ಯುತ್ತದೆಯೊ ಗೊತ್ತಿಲ್ಲ,

ಇನ್ನು ದುಖದ ಬಗ್ಗೆ ಹೇಳುತ್ತ ನೂರಾರು ಚೇಳುಗಳಿಂದ

ತುಂಬಿದ ಹಗೆ ಅಂದರೆ ಧಾನ್ಯ ಸಂಗ್ರಹ ಮಾಡುವ

ವ್ಯವಸ್ಥೆಯಲ್ಲಿ ನಾವು ಬಿದ್ದಹಾಗೆ ಈ ಪ್ರಪಂಚದಲ್ಲಿ

ಇರುವದು ,ಒಂದರ ನಂತರ ಒಂದು ದುಃಖ ಇದ್ದೇ

ಇರುತ್ತದೆ.,ಶ್ರೀ ಶಂಕರರು ಈ ಜಗತ್ತಿನಲ್ಲಿ ನಮ್ಮದು

ದೊಡ್ಡ ಗೊತ್ತಿಲ್ಲದ ಗೊಂಡಾರಣ್ಯದಲ್ಲಿ ಹೊರಟ

ಹಾಗಿದೆ ಎಂದಿದ್ದಾರೆ.ಶ್ರೀ ಮಹಾರಾಜರಂತೂ

ದುಃಖವೇ ಸುಖದ ಮುಸುಕು ಹಾಕಿಕೊಂಡು ನಮ್ಮ ಕಡೆ

ಬರುತ್ತದೆ ಎಂದಿದ್ದಾರೆ.ಪ.ಪೂ.ಗುರುಗಳು ಹೇಳುತ್ತಾರೆ

ಒಂದು ಕಣದ ಸುಖ ಅನುಭವಿಸಲು ಮಣಗಟ್ಟಲೇ

ದುಃಖದೊಳಗೆ ಇರುತ್ತೇವೆ ಎಂದಿದ್ದಾರೆ.ನಾವು ಈಗಾದರೂ ಈ ಜಗತ್ತು ದುಃಖಮಯ ಇದೆ ಎನ್ನುವ

ಗಟ್ಟಿಯಾದ ತಿಳುವಳಿಕೆ ಹೊಂದದಿದ್ದರೆ ಅದು ನಮ್ಮ

ದುರ್ದೈವವೇ ಸರಿ.ಇಂತಹ ಜಗತ್ತಿನಿಂದ ಪಾರಾಗಲು

ನಮ್ಮ ಜೀವನದ ಗುರಿ ಏನಾಗಬೇಕು ,ಯಾವ ದಾರಿ

ಹಿಡಿಯಬೇಕು........!!!

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"

ॐॐॐॐॐॐॐॐॐॐॐॐॐॐॐॐॐॐ

Saturday, January 7, 2023

ನಿಮ್ಮಲ್ಲಿರಲಿ ತ್ಯಾಗದ ಬಲ,ನಿಮ್ಮಲ್ಲಿರಲಿ ತ್ಯಾಗದ ಬಲ

 Study Circle- ಚಿಂತನಾ ಸರಣಿ -25 ದಿ.07-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

"ನಿಮ್ಮಲ್ಲಿರಲಿ ತ್ಯಾಗದ ಬಲ,ನಿಮ್ಮಲ್ಲಿರಲಿ ತ್ಯಾಗದ ಬಲ"

ಎಂದು ಶ್ರೀ ಮಹಾರಾಜರು ಹೇಳುತ್ತಾರೆ.ನಾವು ಇದನ್ನು

ನಿತ್ಯೋಪಾಸನೆಯ ಪಂಚಪದಿ ಭಜನೆಯಲ್ಲಿ 

ದಿನಾಲೂ ಹೇಳುತ್ತೇವೆ..

ಭಗವಂತನು ಈ ಜಗತ್ತಿನಲ್ಲ ಇಂದ್ರಿಯಗಳ ಮೂಲಕ

ಸುಖ ಅನುಭವಿಸುವ ಸೌಲಭ್ಯ ಏಕೆ ಕೊಟ್ಟಿರುತ್ತಾನೆ.

ಈ ಕಡೆಯಲ್ಲಿ ಕೊಟ್ಟು ಇನ್ನೊಂದು ಕಡೆ ಅದನ್ನು ಬಿಡಿ

ಅಂದರೆ ನನ್ನ ಕಡೆಗೆ ಬರುತ್ತೀರಿ ಎಂದು ಹೇಳುತ್ತಾನೆ.

ಇದಕ್ಕೆ ಶ್ರೀ ಮಹಾರಾಜರು ಎಷ್ಟು ಸುಂದರವಾಗಿ

ಹೇಳಿರುತ್ತಾರೆ ಎಂದರೆ, ಒಬ್ಬನು ಒಂದು ಪರೀಕ್ಷೆಗಾಗಿ

ಮುಂಬಯಿಗೆ ಸ್ವಲ್ಪದಿನ ಹೋಗಬೇಕಾಯಿತು.

ಹೋಗುವಾಗ ಕಷ್ಟಪಟ್ಟು ಹೋಗಬೇಕಾಯಿತು.ರಾತ್ರಿ

ನಿದ್ದಗೆಡಬೇಕಾಯಿತು.ಹೋಗಿ ಎರಡು ದಿನ ಇದ್ದು

ಪರೀಕ್ಷೆ ಮುಗಿಸಿದನು.ಎಲ್ಲೂ ಹೊರಗಡೆ ಹೋಗಲಿಲ್ಲ.

ಅಭ್ಯಾಸ ಮಾಡುವದಿತ್ತು ಎಂದು.ನಂತರ ಪರೀಕ್ಷೆ

ಮುಗಿಯಿತು ,ಉತ್ತೀರ್ಣನಾದ ಫಲಿತಾಂಶವೂ ಬಂದಿತು.ನಂತರ ನಾಲ್ಕಾರು ದಿನ ಇದ್ದು ಆರಾಮವಾಗಿ

ಮುಂಬಯಿ ತಿರುಗಾಡಿ ನೋಡಿ ವಾಪಸ್ ಬಂದನು.

ಹೀಗೆಯೇ ನಾವು ಯಾವ್ಯಾವದೊ ಪರಿಸ್ಥಿತಿಯಲ್ಲಿ

ಹುಟ್ಟಿ ಬಂದಿರುತ್ತೇವೆ.ಕಷ್ಟಪಟ್ಟು ಜೀವನ ಮಾಡುತ್ತೇವೆ.

ಆದರೆ ಹುಟ್ಟಿಬಂದ ಉದ್ದೇಶ ಅಂದರೆ ಭಗವಂತನ

ಅನುಭವ ,ಸಾಕ್ಷಾತ್ಕಾರ ಪಡೆದು ಜೀವನದ ಪರೀಕ್ಷೆ

ಮುಗಿಸಿದರೆ ನಂತರ ಉಳಿದ ಜೀವನದಲ್ಲಿ ಎಷ್ಟೆ

ಅನುಭವಿಸಲಿ ಅವು ನಮ್ಮನ್ನು ಬಾಧಿಸುವದಿಲ್ಲ.ಇನ್ನು

ಈ ಜಗತ್ತಿನಲ್ಲಿ ಸುಖ ಅನುಭವಿಸುವ ಸೌಲಭ್ಯಗಳು

ಇರದಿದ್ದರೆ ಮನುಷ್ಯನು ಕರ್ಮದಲ್ಲಿ ಪ್ರವೃತ್ತನೇ

ಆಗುತ್ತಿರಲಿಲ್ಲ ಎಂದು ಸತ್ಪುರುಷರು ಹೇಳುತ್ತಾರೆ.

ಉಪನಿಷತ್ತಿನಲ್ಲಿ ,ಈ ಇಂದ್ರಿಯಗಳು ಸದಾ ನಮ್ಮ

ಮನಸ್ಸನ್ನು ಹೊರಗೇ ಎಳೆಯುವಂತೆ ಬ್ರಹ್ಮದೇವರು

ಸೃಷ್ಟಿ ಮಾಡಿರುತ್ತಾನೆ ಎಂದು ಹೇಳಿರುತ್ತಾರೆ.

ಇದೆಲ್ಲ ಇರಲಿ. ಈ ವಾಸನಾ ತ್ಯಾಗಕ್ಕೆ ಎಷ್ಟು ಬಲ

ಇರಬೇಕು, ಹೇಗೆ ಸಾಧಿಸಬಹುದು.? ನಂತರ ಬರುವ

ಬ್ರಹ್ಮ ಬಲ ಅಂದರೆ ಆತ್ಮಜ್ಞಾನದ ಬಲ ಹೇಗಿರಬಹುದು."ಕರ್ತುಂ ಅಕರ್ತುಂ ಅನ್ಯಥಾ ಕರ್ತುಂ"

ಸಾಮರ್ಥವುಳ್ಳ ಆತ್ಮಜ್ಞಾನಿಗಳು ಭಾರತೀಯ

ಸನಾತನ ಪರಂಪರೆಯಲ್ಲಿ ಈಗಲೂ ಇದ್ದಾರೆ.ನಮಗೆ

ಅವರು ಕಾಣಿಸುವದಿಲ್ಲ ಅಷ್ಟೆ.ಇಂತಹ ಅದ್ಭುತ

ಸಾಮರ್ಥ್ಯ ವಾಸನಾ ತ್ಯಾಗದಿಂದ ಆಗುವ ಬ್ರಹ್ಮಜ್ಞಾನ

ಅಥವಾ ಆತ್ಮಜ್ಞಾನದಿಂದ ,ನಂತರ ಗುರುಗಳು ಹೇಳಿದ

ಪ್ರಕಾರ ಮಾಡುವ ಅಭ್ಯಾಸದಿಂದ ಬರುತ್ತದೆ.

ಹುಬ್ಬಳ್ಳಿ ಕಡೆಯಿಂದ ಬಂದ ಕೆಲವು ಭಕ್ತರು ವಾಪಸ್

ಹೊರಟಿದ್ದರು.ಶ್ರೀ ಮಹಾರಾಜರು ಹರಿಪಂತ ಮಾಸ್ತರರಿಗೆ ,ತಮ್ಮ ಹಾಸಿಗೆಯ ಕೆಳಗೆ ನೋಡಿ

ಅಲ್ಲಿ ಇರುವದನ್ನು ತರಲು ಹೇಳಿದರು.ಅದಕ್ಕೆ ಪಂತರು,

ಈಗ ತಾನೆ ಎಲ್ಲ ಝಾಡಿಸಿ ಸ್ವಚ್ಛ ಮಾಡಿ ಹಾಸಿದ್ದೇನೆ

ಮಹಾರಾಜ ಅಲ್ಲಿ ಏನೂ ಇಲ್ಲ.ಎಂದರು.ಅದಕ್ಕೆ

ಶ್ರೀ ಮಹಾರಾಜರು ,ನಿಮ್ಮ ಬುದ್ಧಿ ಇರಲಿ ನಾನು 

ಹೇಳಿದ್ದೇನೆ ಇನ್ನೊಮ್ಮೆ ನೋಡಿರಿ ಎಂದರು.ಆಗ

ಮಾಸ್ತರರು ನೋಡಿದಾಗ ಅಲ್ಲಿ ಒಂದಷ್ಟು ದುಡ್ಡು ಹಾಗೂ ಹೆಣ್ಣು ಮಕ್ಕಳಿಗೆ ಕೊಡಲು ಸ್ವಲ್ಪ ಖಣ ಇದ್ದವು.

ಅವರು ತಂದುಕೊಟ್ಟರು,.ಹೀಗೆ ಆತ್ಮಜ್ಞಾನಿಗಳ ಶಬ್ದ

ಸಾಮರ್ಥ್ಯ ಇರುತ್ತದೆ.ಸಚ್ಚಿದಾನಂದ ಸ್ವರೂಪರೇ

ಆಗಿದ್ದರು ಶ್ರೀ ಮಹಾರಾಜರು.ಅವರು ಎಷ್ಟು

ನಿರ್ವಾಸಿತರಾಗಿದ್ದರು ಎಂದರೆ, ಕೊನೆಗೆ ದೇಹ ಬಿಡುವಾಗ ಶ್ರೀ ರಾಮನ ಪೂಜೆ ಮುಂದೆ ಹೇಗೆ ಎಂಬ

ವಿಚಾರವೂ ಅವರಿಗೆ ಇರಲಿಲ್ಲ ಎಂದು ಪ.ಪೂ.ಗುರುಗಳು ಹೇಳಿದರು.ಅಸ್ತು.

"ಯಾವುದು ಮನಸ್ಸನ್ನು ತೆಗೆದುಕೊಂಡು ಹೋಗಿ

ವಿಷಯದಲ್ಲಿ ಮುಳುಗಿಸುವದೊ ಅದು ವಾಸನೆ

ಆಗಿರುತ್ತದೆ.ಯಾವುದರಲ್ಲಿ ಮನಸ್ಸು ಹಾಗೂ

ಇಂದ್ರಿಯಗಳು ಮುಳುಗುವವೊ ಅದು ವಿಷಯ

ಆಗಿರುತ್ತದೆ."ಈ ವಾಸನೆಯು ಭಗವಂತನ ಕ್ರಿಯಾ

ಶಕ್ತಿಯೆ ಆಗಿರುತ್ತದೆ.ಅಂದರೆ ಭಗವಂತನ ನೆರಳು

ಆದ ಮಾಯೆಯೆ ವಾಸನೆಯಾಗಿರುತ್ತದೆ.ಇದನ್ನು

ಮಾಯೆ ಎಷ್ಟು ಪ್ರಬಲ ಇರುತ್ತದೆ ಅಂದರೆ, 

ಭಗವಂತನನ್ನು ಮುಚ್ಚಿ ,ಈ ಜಗತ್ತೇ ಸತ್ಯ, ಇಲ್ಲಿ

ಮಾಡುವ ಕೆಲಸಗಳೇ ನಮ್ಮ ನಿಜವಾದ ಕರ್ತವ್ಯ

ಎಂದು ಸುಖದ ಆಮಿಷ ಒಡ್ಡಿ ನಮ್ಮನ್ನು ದುಃಖದ

ಕೊಳ್ಳದಲ್ಲಿ ನಮಗರಿವಿಲ್ಲದಂತೆ ಒಗೆಯುತ್ತದೆ.

ಯಾವ ರೀತಿಯಲ್ಲಿ ಸೂರ್ಯನನ್ನು ಮೋಡಗಳು

ಮುಚ್ಚಿ ಕತ್ತಲೆ ಉಂಟು ಮಾಡುತ್ತವೆಯೊ ಅದೇ ರೀತಿ

ಭಗವಂತನನ್ನು ಮುಚ್ಚಿ ನಮ್ಮಲ್ಲಿ ಅಜ್ಞಾನದ ಅಂಧಕಾರ

ವನ್ನು ಮಾಯೆಯು ಅಂದರೆ ಈ ವಾಸನಾ ಶಕ್ತಿಯು

ಉಂಟು ಮಾಡಿರುತ್ತದೆ.ಮನಸ್ಸಿನಲ್ಲಿ ಬೇಕು ಅನ್ನುವ

ವೃತ್ತಿ ಪ್ರಕಟವಾದ ಕೂಡಲೇ ನಮಗೆ ಭಗವಂತನ

ವಿಸ್ಮರಣೆ ಆಗುತ್ತದೆ.ಇದು ನಮ್ಮನ್ನು ನಾನಾ ಪ್ರಕಾರದ ಕರ್ಮ ಮಾಡಲು ಹಚ್ಚುತ್ತದೆ.ಇಂಥ ಪ್ರಬಲವಾದ

ಮಾಯೆಯನ್ನು ನಮ್ಮ ಸಾಮರ್ಥ್ಯದಿಂದ ಗೆಲ್ಲುತ್ತೇವೆ

ಎನ್ನುವುದು ಅಸಾಧ್ಯವಾದದ್ದು.ಭಗವಂತನಿಗೆ ಶರಣು

ಹೋಗುವುದರಿಂದ ಮಾತ್ರ ಸಾಧ್ಯ.ಭಗವಂತನ

ಇನ್ನೊಂದು ಶಕ್ತಿ ಅಂದರೆ ಶಾರದಾ ಶಕ್ತಿಯ ಕೃಪೆ 

ಆದರೆ ಇದು ಸಾಧ್ಯ.ಇವೇ ಶಕ್ತಿಗಳು ಪ್ರತಿಯೊಬ್ಬರಲ್ಲೂ

ವಿದ್ಯಾ ಹಾಗೂ ಅವಿದ್ಯಾ ರೂಪದಲ್ಲಿ ಇರುತ್ತವೆ.

ಎಷ್ಟು ಹೆಚ್ಚು ನಮಗೆ ದೃಶ್ಯದಲ್ಲಿ ಆಸಕ್ತಿಯೊ ಅಷ್ಟು

ಹೆಚ್ಚು ಅವಿದ್ಯಾ ಪ್ರಮಾಣ ನಮ್ಮಲ್ಲಿ ಇರುತ್ತದೆ.

ಸದ್ಯದ ನಮ್ಮ ಸ್ಥಿತಿ ನೋಡಿದರೆ ಗೋದಿಕಾಳಿನಷ್ಟು

ವಿದ್ಯಾ ಇದ್ದರೆ ಪರ್ವತದಷ್ಟು ಅವಿದ್ಯಾ ಇರುತ್ತದೆ.

ಶಾರದೆಯ ಕೃಪೆ ಜ್ಞಾನಶಕ್ತಿಯ ಕೃಪೆ ಆಗಿರುತ್ತದೆ.

ಇದು ವಾಣಿರೂಪದಲ್ಲಿ ನಮ್ಮಲ್ಲಿ ಪ್ರಕಟ

ಆಗುತ್ತದೆ.ಸದ್ಗುರುಗಳು ಕೊಡುವ ನಾಮವು ಇದೇ

ಆಗಿರುತ್ತದೆ.ಪರಾವಾಣಿಯಲ್ಲಿ ಇರುವ ನಾಮವನ್ನು

ನಮಗೆ ಸದ್ಗುರುಗಳು ಕೊಡುತ್ತಾರೆ.ಸದ್ಗುರುಗಳು ಕೊಟ್ಟ

ನಾಮವನ್ನು ಹಿಡಿದುಕೊಂಡು ನಾವು ನಮ್ಮ ಮನಸ್ಸನ್ನು

ಪರಾವಾಣಿಯವರೆಗೆ ಒಯ್ಯಬೇಕು.ಯಾವಾಗ ಸಂಪೂರ್ಣ ಚಿತ್ತಶುದ್ಧಿ ಆಗುವುದೊ ಆಗ ಇದು ಸಂಭವಿಸುವದು.ನಾಮಸ್ಮರಣೆಯ ಮೂಲಕ

ವಾಸನಾ ತ್ಯಾಗ ಹೇಗೆ ?...!!!

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Friday, January 6, 2023

ಮೋಕ್ಷ ಪ್ರಾಪ್ತಿಯ ಗುಟ್ಟು

  ಶ್ರೀ ರಾಮ ಸಮರ್ಥ 

                              ಸದ್ಗುರು ಶ್ರೀ  ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು
                                              ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಕೀ ಜೈ 
  ಪರಮ ಪ್ರಾಪ್ತಿ, ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ - ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು . ಅಹೇತುಕ  ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥ ರಾಗಬೇಕು . ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ ರಾಮನಾಮ ಸ್ಮರಣ ದ ಹೊರತು  ಎರಡನೇ ಉಪಾಯವಾವುದೂ ಇಲ್ಲ .
ಆಯುಷ್ಯದ್ದು ಭರವಸೆ ಇಲ್ಲ . ಆದಷ್ಟು ತೀವ್ರವಾಗಿ ಕೃ ತಾರ್ಥ ರಾಗಲಿಕ್ಕೆ  ಪ್ರಯತ್ನ ಮಾಡಬೇಕು . ಪಾರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ  ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು  ಸಾಧು ಸಂಗತಿಯಿಂದ ಕ್ಷಮಾ , ಭೂತದಯಾ , ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವೃತ್ತಿ ಮಾರ್ಗದ ತ್ಯಾಗ, ನಿವೃತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗ ಗಳು ಪ್ರಯತ್ನ ಮಾಡದೆ ಲೇ ದೊರೆಯುತ್ತವೆ  ಕಾಮ-ಕ್ರೋಧಾದಿ ಷದ್ವೈ ರಿಗಳೂ , ಪಾರಮಾರ್ಥಕ್ಕೆ ವಿಘ್ನ ಮಾಡತಕ್ಕಂಥ ದಂಭ ಅಹಂಕಾ ರಾದಿ ಗಳೂ  ತಮ್ಮಷ್ಟಕ್ಕೆ ತಾವೇ ಲಯ ಹೊಂದುತ್ತವೆ ಸಾಧು ಸಂಗತಿ ಮಹಿಮಾ ಅಗಾಧವದೆ  ಸಾಧುಗಳಲ್ಲಿ ಸದೋದಿತ ಭಗವತ್ಚರ್ಚ , ಭಗವದ್ಗುಣಾನುವರ್ಣನ , ರಾಮನಾಮಸ್ಮರಣ , ಸದೋಪದೇಶ ಅಹೋ ರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲಾ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತ ನಾಗುತ್ತಾನೆ

ವಿಷಯಾಕಾರ ವೃತ್ತಿ ಯಿಂದ ಬಂಧಾ, ಪರಮಾತ್ಮಾಕಾರ ವೃತ್ತಿ ಯಿಂದ ಮೋಕ್ಷಾ . ವೃತ್ತಿಗೆ ವಿಷಯದ ಸಂಭಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ.  ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದ ಕಡೆ ಹೋಗಲಿಕ್ಕೆ ವೃತ್ತಿಗೆ ಸವಡ  ಕೊಡಬಾರದು.

"ಹೇ ರಾಮಾ, ಹೇ ದಯಾನಿಧೇ ! ನನ್ನ ಎಂದು  ಉಧ್ಧಾರ ಮಾಡುವೆ? ನಿನ್ನ ಸಗುಣ ಮೂರ್ತಿ ಎಂದು ಕಂಡೇನು? ರಾಮಾ, ನಾನು ಅಗಾಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ.  ಹೇ ದಯಾ ಸಮುದ್ರಾ , ರಾಮಾ , ತೀವ್ರವಾಗಿ ಭವ ಸಮುದ್ರವನ್ನು ದಾಟಿಸು.. ಸಂತತಿ, ಸಂಪತ್ತು ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ . ನಿನ್ನ ದೃಢ ಭಕ್ತಿ ಕೊಡು .ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ . ಕಿವಿಗಳು ರಾಮಾ , (ನಿನ್ನ) ಕಥಾ ಕೇಳಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸಂಮಾರ್ಜನಾದಿ  ಸೇವಾ  ಘಡಾಯಿಸಲಿ , ಪಾದಗಳಿಂದ ಪ್ರದಕ್ಷಿಣಾ ಘಡಾಯಿಸಲಿ. . ರಾಮಾ!  ನಾನು ಅಜ್ಞಾನಿ  ಇದ್ದೇನೆ.  ಏನೋ ತಿಳುವಳಿಕೆಯಿಲ್ಲ .ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. . ಶ್ರೀರಾಮಾ , ನಿನ್ನ ಹೊರತು ನನಗೆ ಯಾರೂ ಆಧಾರ ಇಲ್ಲ . ನೀನೆ ತಂದೆ, ತಾಯಿ, ಬಂಧು, ಬಳಗಾ, . ಹೇ ಕೃಪಾಸಾಗರಾ!  ಶ್ರೀ ರಾಮಾ! ಅಜ್ಞಾನಾಧ್ವಾಂತ  ನಿವಾರಣಾ , ನೀನೇ ಗತಿ ಎಂದು ಅನನ್ಯಭಾವದಿಂದ  ಶರಣು  ಹೋಗಬೇಕು.  ಸಹಸಾ  ಪಾಪಮಾರ್ಗದ ಕಡೆ ಪ್ರವೃತ್ತಿ ಇರಬಾರದು . ಸುಳ್ಳು ಕೆಲಸಕ್ಕೆ ಹೋಗಬಾರದು . ಜನರು ನಿಂದಾ -ಮಾಡಿದರೆ  ವಿಷಾದ ಪಡಬಾರದು . ಸ್ತುತಿ ಮಾಡಿದರೆ ಹರ್ಷ ಪಡಬಾರದು . ಜನರ ನಿಂದಾ-ಸ್ತುತಿ  ಮಾಡಬಾರದು . ಸರ್ವತ್ರದಲ್ಲಿ ಪರಮಾತ್ಮ ಇದ್ದಾನೆ..  ಹೆಂಡರು ಮಕ್ಕಳು, ಮನೆ, ಹೊಲಾ. ಸಂಪತ್ತು ಮೊದಲಾದ ದೃಶ್ಯ ಪದಾರ್ಥ ಮಿಥ್ಯಾ ಎಂದು ತಿಳಿಯಬೇಕು . ದೇವರು ಒಬ್ಬನೇ ಶಾಶ್ವತ. . ಅಹೋ ರಾತ್ರಿ ರಾಮಭಜನೆಯಲ್ಲೇ ಕಾಲ ಕ್ರಮಣ ಮಾಡಬೇಕು.
                                               ಜಯ ಜಯ ರಘುವೀರ ಸಮರ್ಥ